ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ
- ಲೈಂಗಿಕ ದೌರ್ಜನ್ಯ ನಡೆಸಿ ಆಕೆ ಗರ್ಭಾವತಿ ಆಗಲು ಕಾರಣನಾದ ವ್ಯಕ್ತಿ
- ಕಠಿಣ ಕಾರಾವಾಸ ಶಿಕ್ಷೆ ಮತ್ತು 2 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯ
- ಕುಂಸಿ ಠಾಣಾ ವ್ಯಾಪ್ತಿಯ 30 ವರ್ಷದ ವ್ಯಕ್ತಿ ಶಿಕ್ಷಿಗೆ ಒಳಗಾದವ
ಶಿವಮೊಗ್ಗ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ(Sexual assault) ನಡೆಸಿ ಆಕೆ ಗರ್ಭಾವತಿ ಆಗಲು ಕಾರಣನಾದ ವ್ಯಕ್ತಿಗೆ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್ ಟಿಎಸ್ ಸಿ-1) 20 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 2 ಲಕ್ಷ ರೂ. ದಂಡ ವಿಧಿಸಿದೆ. ನೊಂದ ಬಾಲಕಿಗೆ 1.80 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದೆ.
ಕುಂಸಿ ಠಾಣಾ ವ್ಯಾಪ್ತಿಯ 30 ವರ್ಷದ ವ್ಯಕ್ತಿ ಶಿಕ್ಷಿಗೆ ಒಳಗಾದವ. ಈತ 2022ನೇ ಸಾಲಿನಲ್ಲಿ 17 ವರ್ಷದ ಅಪ್ರಾಪ್ತೆ(Minor)ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದರಿಂದ ಆಕೆ ಗರ್ಭಿಣಿ ಕೂಡ ಆಗಿದ್ದಳು. ಈ ಬಗ್ಗೆ ಕುಂಸಿ ಠಾಣೆಯಲ್ಲಿ ಪೋಕ್ಸೊ ಪ್ರಕರಣ(POCSO case) ದಾಖಲಾಗಿತ್ತು.
ಆಗಿನ ತನಿಖಾಧಿಕಾರಿಯಾಗಿದ್ದ ಇನ್‌ಸ್ಪೆಕ್ಟರ್ ಎಂ.ತಿಪ್ಪೆಸ್ವಾಮಿ ಅವರು ಪ್ರಕರಣದ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ(Indictment List) ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ನಿಂಗನಗೌಡ ಭ ಪಾಟೀಲ್ ಅವರು ಆರೋಪ ಸಾಬಿತಾದ ಹಿನ್ನೆಲೆಯಲ್ಲಿ ವ್ಯಕ್ತಿಗೆ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ಇದೇ ವೇಳೆ ನೊಂದ ಬಾಲಕಿಗೆ ಪರಿಹಾರಕ್ಕೂ ಆದೇಶಿಸಿದ್ದಾರೆ. ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕ ಶ್ರೀಧರ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.