ಬಂಧಿತ ಆರೋಪಿ ಹೇಮಂತ್ ಕುಮಾರ್ ಅಲಿಯಾಸ್ ಗಣೇಶ್. 
ಶಿವಮೊಗ್ಗ

ಡಿಕೆಶಿ ಆಪ್ತ ಸಹಾಯಕನೆಂದು ವಂಚಿಸಿದ್ದವನ ಬಂಧನ | Recreation Club

ಪ್ರಮುಖ ಮುಖ್ಯಾಂಶಗಳು

  • ರಿಕ್ರಿಯೇಷನ್ ಕ್ಲಬ್ ಪರವಾನಗಿ ಕೊಡಿಸುವುದಾಗಿ ನಂಬಿಸಿದ್ದ
  • ರೈತನಿಂದ ಹಂತ ಹಂತವಾಗಿ 15 ಲಕ್ಷ ರೂ. ಪಡೆದು ವಂಚನೆ
  • ಆರೋಪಿ ಹೇಮಂತ್ ಕುಮಾರ್ ಬಂಧಿಸಿದ ಪೊಲೀಸರು
ಶಿವಮೊಗ್ಗ: ಡಿ.ಕೆ.ಶಿವಕುಮಾರ್(Chief Minister DK Shivakumar) ಅವರ ಆಪ್ತ ಸಹಾಯಕನೆಂದು ಹೇಳಿಕೊಂಡು ರಿಕ್ರಿಯೇಷನ್ ಕ್ಲಬ್ ಪರವಾನಗಿ ಕೊಡಿಸುವುದಾಗಿ ನಂಬಿಸಿ ರೈತನಿಂದ 15 ಲಕ್ಷ ರೂ. ಪಡೆದು ವಂಚನೆ ಮಾಡಿದ್ದ ಆರೋಪಿಯನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 
ಹೇಮಂತ್ ಕುಮಾರ್ ಅಲಿಯಾಸ್ ಗಣೇಶ್ ಬಂಧಿತ ಆರೋಪಿ. ಈತ ಶಿವಮೊಗ್ಗದ ಕೆಎಚ್‌ಬಿ ಕಾಲನಿಯ ನಿವಾಸಿ, ರೈತ ಮಂಜುನಾಥ ಹಂಜಿ ಅವರಿಂದ 15 ಲಕ್ಷ ರೂ. ಪಡೆದಿದ್ದ. ತಾನು ಡಿ.ಕೆ.ಶಿವಕುಮಾರ್ ಅವರ ಆಪ್ತ ಸಹಾಯಕ(Personal assistant)ನೆಂದು ಪರಿಚಯಿಸಿಕೊಂಡು ರಿಕ್ರಿಯೇಷನ್ ಕ್ಲಬ್(Recreation Club) ಪರವಾನಗಿ ಕೊಡಿಸುವುದಾಗಿ ನಂಬಿಸಿದ್ದ. ಫೋನ್‌ಪೇ ಮೂಲಕ ಹಾಗೂ ನಗದು ರೂಪದಲ್ಲಿ ಹಂತ ಹಂತವಾಗಿ 15 ಲಕ್ಷ ರೂ. ಪಡೆದು ವಂಚನೆ ಮಾಡಿದ್ದ. 
ನಂತರ ಪರವಾನಗಿ ಕೊಡಿಸದೇ ಹಣದೊಂದಿಗೆ ತಲೆಮರೆಸಿಕೊಂಡಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ತುಂಗಾನಗರ ಪೊಲೀಸರು(Tunganagar Police) ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಂಚನೆಗೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಕಲೆ ಹಾಕಲು ಹಾಗೂ ಇದೇ ರೀತಿಯಲ್ಲಿ ಇತರರಿಗೂ ವಂಚನೆ ನಡೆಸಿರುವ ಬಗ್ಗೆ ತನಿಖೆ ಮುಂದುವರಿದಿದೆ.