ಶಿಕಾರಿಪುರ ತಾಲೂಕಿನ ಶೀರಿಹಳ್ಳಿ ತಾಂಡಾದಲ್ಲಿ ಮೆಕ್ಕೆಜೋಳ ಬಿತ್ತನೆಗೆ ಟ್ರಾಕ್ಟರ್ ಮೂಲಕ ಜಮೀನು ಉಳುಮೆ ಮಾಡಿದ ರೈತ.
- ಜಿಲ್ಲಾದ್ಯಂತ 1.13 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ
- ರಸಗೊಬ್ಬರ, ಬಿತ್ತನೆ ಬೀಜ ದಾಸ್ತಾನು ಮಾಡಿದ ಕೃಷಿ ಇಲಾಖೆ
- ಮುಂಗಾರುಪೂರ್ವ ಮಳೆಯಿಂದ ರೈತರಲ್ಲಿ ಕೊಂಚ ಮಂದಹಾಸ
ಪ್ರಸಕ್ತ ವರ್ಷ ಮುಂಗಾರು ಮಳೆ(Monsoon rain) ಮೇ ಮಾಸಾಂತ್ಯಕ್ಕೆ ಆರಂಭಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದರೂ ಮುಂಗಾರು ಪೂರ್ವ ಜಿಲ್ಲೆಯ ಹಲವೆಡೆ ಉತ್ತಮ ಮಳೆ ಸುರಿದಿದ್ದು ಇದರಿಂದ ಮಲೆನಾಡಿನ ರೈತರಲ್ಲಿ ಕೊಂಚ ಮಂದಹಾಸ ಮೂಡಿದೆ. ಮತ್ತೊಂದೆಡೆ ಅದಕ್ಕೆ ಪೂರಕವಾಗಿ ಕೃಷಿ ಇಲಾಖೆ(Agriculture Department) ಕೂಡ 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಅಗತ್ಯವಾದ ರಸಗೊಬ್ಬರ ಮತ್ತು ಬಿತ್ತನೆ ಬೀಜದ ದಾಸ್ತಾನು ಮಾಡಿಕೊಂಡು ಸಜ್ಜಾಗಿದೆ.
ಜಿಲ್ಲಾದ್ಯಂತ 1.13 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಅದರಲ್ಲಿ 66,200 ಹೆಕ್ಟೇರ್ ಭತ್ತ(Paddy), 45,807 ಹೆಕ್ಟೇರ್ ಮೆಕ್ಕೆಜೋಳ(Maize), 387 ಹೆಕ್ಟೇರ್ ದ್ವಿದಳ ಧಾನ್ಯಗಳು(Legumes), 390 ಹೆಕ್ಟೇರ್ ವಾಣಿಜ್ಯ ಬೆಳೆಗಳು(Commercial crops), 150 ಹೆಕ್ಟೇರ್ ಎಣ್ಣೆ ಕಾಳು, 205 ಹೆಕ್ಟೇರ್ ಹತ್ತಿ, 185 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯ ಗುರಿ ಹಾಕಿಕೊಂಡಿದೆ. ಅದಕ್ಕೆ ತಕ್ಕಂತೆ ಬಿತ್ತನೆ ಬೀಜಗಳ ದಾಸ್ತಾನು ಕೂಡ ಮಾಡಿಕೊಂಡಿದೆ.
ರಾಜ್ಯದ ಹಲವೆಡೆ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು ರೈತರಲ್ಲಿ ಸಹಜವಾಗಿ ಆತಂಕ ಮೂಡಿಸುತ್ತಿದೆ. ಆದರೆ ಜಿಲ್ಲೆಯಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆ ದಾಸ್ತಾನು ಮಾಡಿಕೊಂಡಿದ್ದು ಮಲೆನಾಡಿನ ರೈತರಲ್ಲಿದ್ದ ಆತಂಕವನ್ನು ದೂರ ಮಾಡಿದೆ.
ತಗ್ಗಿದ ಭತ್ತ ಬೆಳೆಯುವ ಪ್ರದೇಶ: ಜಿಲ್ಲೆಯು ಒಂದು ಕಾಲದಲ್ಲಿ ಭತ್ತದ ಕಣಜ(Rice threshing floor) ಆಗಿತ್ತು. ಆದರೆ ಕಳೆದೊಂದು ದಶಕದಲ್ಲಿ ಶಿವಮೊಗ್ಗ ಜಿಲ್ಲೆಯ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಭತ್ತದ ಬೆಳೆಯುತ್ತಿದ್ದ ಪ್ರದೇಶಗಳು ಅಡಿಕೆ ತೋಟ(Areca nut plantation)ಗಳಾಗಿ ಮಾರ್ಪಟ್ಟಿವೆ. ಹಾಗಾಗಿ ಒಂದು ಲಕ್ಷ ಹೆಕ್ಟೇರ್ ಸನಿಹ ಇದ್ದ ಭತ್ತ ಬೆಳೆಯುವ ಪ್ರದೇಶವು ಇದೀಗ 66,200 ಹೆಕ್ಟೇರ್‌ಗೆ ಇಳಿದಿದೆ. ಮುಂದಿನ ವರ್ಷಗಳಲ್ಲಿ ಭತ್ತ ಬೆಳೆಯುವ ಪ್ರಮಾಣ ಮತ್ತಷ್ಟು ಇಳಿಕೆ ಆಗಲಿದೆ ಎನ್ನುವುದು ಕೃಷಿ ಇಲಾಖೆ ಲೆಕ್ಕಚಾರವಾಗಿದೆ.
ವಾಡಿಕೆಗಿಂತ ಶೇ.27ರಷ್ಟು ಮಳೆ ಅಧಿಕ: ಪ್ರಸಕ್ತ ವರ್ಷ ಮುಂಗಾರು ಪೂರ್ವ ಮಳೆ ಸುರಿದಿದ್ದು ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕಿನಲ್ಲಿ ಅಡಿಕೆ, ತೆಂಗು, ಬಾಳೆ ಇತ್ಯಾದಿ ಬೆಳೆಗಳಿಗೆ ಹಾನಿ ಮಾಡಿದೆ. ಜ.1ರಿಂದ ಮೇ 21ರವರೆಗೆ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.27ರಷ್ಟು ಮಳೆ ಹೆಚ್ಚಾಗಿದೆ. ಹೊಸನಗರ ತಾಲೂಕಿನಲ್ಲಿ ಶೇ.29ರಷ್ಟು ಮಳೆ ವಾಡಿಕೆಗಿಂತ ಕಡಿಮೆ ಆಗಿದೆ. ಉಳಿದಂತೆ ಶಿವಮೊಗ್ಗ(Shimogga)ದಲ್ಲಿ ಗರಿಷ್ಠ ಶೇ.67ರಷ್ಟು, ಸೊರಬ ತಾಲೂಕಿನಲ್ಲಿ ಶೇ.60ರಷ್ಟು, ಸಾಗರದಲ್ಲಿ ಶೇ.54, ಭದ್ರಾವತಿಯಲ್ಲಿ ಶೇ.10, ತೀರ್ಥಹಳ್ಳಿಯಲ್ಲೇ ಶೇ.7ರಷ್ಟು ಹಾಗೂ ಶಿಕಾರಿಪುರದಲ್ಲಿ ಶೇ.5ರಷ್ಟು ಮಳೆ ವಾಡಿಕೆಗಿಂತ ಹೆಚ್ಚಾಗಿದೆ.
1.03 ಲಕ್ಷ ಮೆ. ಟನ್ ರಸಗೊಬ್ಬರ ಬೇಡಿಕೆ
ಪ್ರಸಕ್ತ 2026ರ ಹಂಗಾಮಿಗೆ ಏಪ್ರಿಲ್ನಿಂದ ಸೆಪ್ಟೆಂಬರ್ ಅಂತ್ಯದವರೆಗೆ 1,03,103 ಮೆಟ್ರಿಕ್ ಟನ್ ವಿವಿಧ ಗ್ರೇಡ್‌ಗಳ ರಸಗೊಬ್ಬರ(Fertilizer)ದ ಬೇಡಿಕೆ ಇದೆ. ಈಗಾಗಲೇ ಜಿಲ್ಲೆಯಲ್ಲಿ ಕಳೆದ ಸಾಲಿನದ್ದು ಸೇರಿ 56,264.6 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ. ಇದುವರೆಗೆ 7,350.9 ಮೆಟ್ರಿಕ್ ಟನ್‌ನಷ್ಟು ಗೊಬ್ಬರವನ್ನು ಎಲ್ಲ ತಾಲೂಕು ವ್ಯಾಪ್ತಿಯಲ್ಲಿ ಸರಬರಾಜು ಮಾಡಲಾಗಿದೆ. ಹಾಲಿ 43,429.3 ಮೆಟ್ರಿಕ್ ಟನ್ ವಿವಿಧ ಗ್ರೇಡ್‌ಗಳ ರಸಗೊಬ್ಬರದ ದಾಸ್ತಾನಿದೆ. ಅದರಲ್ಲಿ ಮಾರಾಟಗಾರರ ಅಥವಾ ವಿತರಕರ ಬಳಿ 41,325.3 ಮೆಟ್ರಿಕ್ ಟನ್ ಹಾಗೂ ಕರ್ನಾಟಕ ರಾಜ್ಯ ಮಾರಾಟ ಮಹಾ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ 2,084.35 ಮೆಟ್ರಿಕ್ ಟನ್‌ನಷ್ಟು ರಸಗೊಬ್ಬರ ದಾಸ್ತಾನಿಗೆ ಇಲಾಖೆ ಕ್ರಮ ವಹಿಸಿದೆ.
ಬಿತ್ತನೆ ಬೀಜದ ಪೂರೈಕೆಗೂ ತಯಾರಿ
ಜಿಲ್ಲೆಯಲ್ಲಿ ಬಿತ್ತನೆ ಬೀಜ(Sowing seed) ಪೂರೈಕೆಗೆ ಇಲಾಖೆ ಸನ್ನದ್ಧವಾಗಿದೆ. ಪ್ರಸಕ್ತ ಸಾಲಿಗೆ ಏಳು ತಾಲೂಕಿನಿಂದ 7,784.45 ಕ್ವಿಂಟಾಲ್ ಹಾಗೂ ಸಹಾಯಧನದಡಿ 17,700 ಕ್ವಿಂಟಾಲ್ ಬಿತ್ತನೆ ಬೀಜವನ್ನು ಕರ್ನಾಟಕ ರಾಜ್ಯ ಮಾರಾಟ ಮಹಾ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಬೀಜ ನಿಗಮಗಳ ಮೂಲಕ ಎಲ್ಲ ರೈತ ಸಂಪರ್ಕ ಕೇಂದ್ರ(Raita samparka kendra)ಗಳಿಗೆ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲು ಸೂಚನೆಯನ್ನು ನೀಡಿದೆ. ಉಳಿದಂತೆ ಮುಂಗಾರು ಪೂರ್ವವೇ ಕೃಷಿ ಇಲಾಖೆ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿಗೆ ಒತ್ತು ನೀಡಿದೆ. ಅಲ್ಲದೆ, ಮುಂಗಾರು ಹಂಗಾಮಿಗೆ ರೈತರಿಗೆ ಗುಣಮಟ್ಟದ ಕೃಷಿ ಪರಿಕರಗಳ ಪೂರೈಕೆಗೆ ಸಕಲ ಸಿದ್ಧತೆಗಳನ್ನು ಇಲಾಖೆ ಈ ಬಾರಿಯೂ ಮಾಡಿಕೊಂಡಿದೆ.
* ಬಿತ್ತನೆ ಗುರಿ
| ತಾಲೂಕು | ಪ್ರದೇಶ(ಹೆಕ್ಟೇರ್) |
|---|
| ಶಿಕಾರಿಪುರ | 30,662 |
| ಸೊರಬ | 29,665 |
| ಶಿವಮೊಗ್ಗ | 22,105 |
| ಸಾಗರ | 12,340 |
| ಹೊಸನಗರ | 7,950 |
| ಭದ್ರಾವತಿ | 4,050 |
| ತೀರ್ಥಹಳ್ಳಿ | 6,600 |
| ಒಟ್ಟು | 1,13,372 |
"
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಅಗತ್ಯವಾದ ರಸಗೊಬ್ಬರ ಮತ್ತು ಬಿತ್ತನೆ ಬೀಜವನ್ನು ದಾಸ್ತಾನು ಮಾಡಲಾಗಿದೆ. ಈ ಬಾರಿ ರಸಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯಗೊಳಿಸಲಾಗಿದೆ. ಇದರಿಂದ ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ದಂಧೆಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ.
— ಡಾ. ಎಂ.ಕಿರಣ್‌ಕುಮಾರ್, ಶಿವಮೊಗ್ಗ ಜಂಟಿ ಕೃಷಿ ನಿರ್ದೇಶಕ