ಸಮೀಪದ ಮಲ್ಲಾಪುರದಲ್ಲಿ ಶ್ರೀ ಗುಡ್ಡದ ಮಲ್ಲೇಶ್ವರ ಜಾತ್ರೋತ್ಸವದಲ್ಲಿ ನೆರವೇರಿದ ಕೆಂಡಾರ್ಚನೆ.
ಹೊಳೆಹೊನ್ನೂರು: ಭದ್ರಾವತಿ ತಾಲೂಕಿನ ಮಲ್ಲಾಪುರದ ಶ್ರೀ ಗುಡ್ಡದ ಮಲ್ಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ನೆತ್ತಿಸುಡುವ ಬಿಸಿಲನ್ನೂ ಲೆಕ್ಕಿಸದೆ ಮಹಿಳೆಯರು, ಮಕ್ಕಳಾದಿಯಾಗಿ ಕೆಂಡ ಹಾಯ್ದು ಮಲ್ಲೇಶ್ವರ ಸ್ವಾಮಿಗೆ ಭಕ್ತಿ ಸಮರ್ಪಿಸಿದರು. ಮಹಿಳೆಯರು ಬಾಯಿ ಬೀಗ ಚುಚ್ಚಿಕೊಂಡು ಸ್ವಾಮಿಗೆ ಹರಕೆ ತೀರಿಸಿದರು. ಹರಕೆ ಮಾಡಿಕೊಂಡವರು ಸ್ವಾಮಿ ಸನ್ನಿಧಾನದಲ್ಲಿ ಮಕ್ಕಳ ಜವಳ ತೆಗೆಸಿದರು.
ರಾತ್ರಿ ನಡೆದ ರಥೋತ್ಸವದಲ್ಲಿ ವಿವಿಧ ಫಲ-ಪುಷ್ಪಗಳಿಂದ ವಿಶೇಷವಾಗಿ ಸಿಂಗರಿಸಲಾಗಿದ್ದ ರಥದಲ್ಲಿ ವಿರಾಜಮಾನವಾಗಿದ್ದ ಶ್ರೀ ಮಲ್ಲೇಶ್ವರ ಸ್ವಾಮಿಯನ್ನು ಕಣ್ತುಂಬಿಕೊಂಡರು. ತಮ್ಮ ಕೋರಿಕೆಯನ್ನು ಬಾಳೆ ಹಣ್ಣಿನ ಮೇಲೆ ಬರೆದು ರಥದ ಕಳಸಕ್ಕೆ ಎಸೆದರು. ಮಹಿಳೆಯರು ಪಾವರ್ತಿ ದೇವಿಗೆ ಮಡಿಲಕ್ಕಿ ತುಂಬಿಸಿ ಹಣ್ಣು ಕಾಯಿ ಮಾಡಿಸಿದರು. ಜಾತ್ರಾ ಮಹೋತ್ಸವಕ್ಕೆ ಅಕ್ಕಪಕ್ಕದ ಹಳ್ಳಿಗಳಿಂದ ಗಾಡಿಗಳನ್ನು ಕಟ್ಟಿಕೊಂಡು ಆಗಮಿಸಿದ ಭಕ್ತರು ಬಿಸಿಲ ಬೇಗೆ ತಣಿಸಲು ಭಕ್ತರಿಗೆ ಬೆಲ್ಲದ ಪಾನಕ, ಮಜ್ಜಿಗೆ ಹಂಚಿದರು. ಕೆಂಡಾರ್ಚನೆ ನಂತರ ಅನ್ನಸಂತರ್ಪಣೆ ನೆರವೇರಿತು. 12 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು. ಸೇವಾ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.