ನವೀನ್ ಬಿಲ್ಗುಣಿ ಶಿವಮೊಗ್ಗ
ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ, ಜಲಪಾತಗಳ ತವರೂರು ಎಂದೇ ಹೆಸರಾಗಿದ್ದ ಮಲೆನಾಡಿನ ಹೃದಯಭಾಗ ಶಿವಮೊಗ್ಗ ಜಿಲ್ಲೆಯಲ್ಲೂ ಈ ಬಾರಿ ‘ಬರ’ದ ಕರಿನೆರಳು ಆವರಿಸಿದ್ದು, ರಾಜ್ಯ ಸರ್ಕಾರ ಐದು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ ಬೆನ್ನಲ್ಲೇ ಮಲೆನಾಡಿನ ರೈತರ ಚಿತ್ತ ಬರ ಪರಿಹಾರದತ್ತ ನೆಟ್ಟಿದೆ.
ಭೀಕರ ಬರಕ್ಕೆ ತುತ್ತಾಗಿರುವ ಕರುನಾಡಲ್ಲಿ ಅಜಿತ್‌ಕುಮಾರ್ ಸಾಹು ನೇತೃತ್ವದ ಕೇಂದ್ರದ ಮೂರು ಬರ ಅಧ್ಯಯನ ತಂಡಗಳು ಈಗಾಗಲೇ ಆಗಮಿಸಿದ್ದು, ಮೊದಲ ಹಂತದಲ್ಲಿ ಘೋಷಣೆಯಾಗಿದ್ದ ಜಿಲ್ಲೆಗಳಲ್ಲಿ ಸಮೀಕ್ಷೆ ಕೈಗೊಂಡಿವೆ. ಇತ್ತೀಚೆಗೆ ನಾಲ್ಕನೇ ಹಂತದಲ್ಲಿ ಶಿವಮೊಗ್ಗ ಜಿಲ್ಲೆಯ ಐದು ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಿದ್ದು, ಕೇಂದ್ರದ ಅಧ್ಯಯನ ತಂಡ ಜಿಲ್ಲೆಗೆ ಯಾವಾಗ ಆಗಮಿಸಲಿದೆ ಎಂಬ ಕುತೂಹಲ ಮಲೆನಾಡಿಗರಲ್ಲಿ ಮೂಡಿದೆ.
ಸೆಪ್ಟೆಂಬರ್ 30ಕ್ಕೆ ಅಂತ್ಯಗೊಂಡ ನೈರುತ್ಯ ಮುಂಗಾರಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲೂ ಶೇ. 39ರಷ್ಟು ಮಳೆ ಕೊರತೆ ಉಂಟಾಗಿದೆ. ಮಳೆ ಇಲ್ಲದೆ ಕಂಗಾಲಾಗಿರುವ ಅನ್ನದಾತರು ಇದೀಗ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಬರದಲ್ಲಿ ಸರ್ಕಾರ ರೈತರ ಕೈ ಹಿಡಿಯಲಿದೆ ಎಂಬ ಆಶಾಭಾವನೆ ಹೊಂದಿದ್ದಾರೆ. ಅದಕ್ಕೆ ಪೂಕರವಾಗಿ ರಾಜ್ಯ ಸರ್ಕಾರ ಶಿವಮೊಗ್ಗ ಸೇರಿ ಐದು ತಾಲೂಕುಗಳನ್ನು ಬರದ ಪಟ್ಟಿಗೆ ಸೇರ್ಪಡೆ ಮಾಡಿದೆ. ಇದೀಗ ಉತ್ತರ ಕರ್ನಾಟಕ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೇಂದ್ರದ ಬರ ಅಧ್ಯಯನ ತಂಡ ಸಮೀಕ್ಷೆ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಕೇಂದ್ರದ ತಂಡ ಜಿಲ್ಲೆಯ ಬರಪೀಡಿತ ತಾಲೂಕುಗಳಿಗೂ ಭೇಟಿ ನಿರೀಕ್ಷೆ ಗರಿಗೆದರಿದೆ.
ಕೊನೆಗೂ ಐದು ತಾಲೂಕು ಸೇರ್ಪಡೆ: ಅನ್ನದಾತರು, ರೈತ ಸಂಘಟನೆಗಳ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ 4ನೇ ಹಂತದಲ್ಲಿ ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ತೀರ್ಥಹಳ್ಳಿ ಹಾಗೂ ಸೊರಬ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ನಡೆಸಿದ ಜಂಟಿ ಸಮೀಕ್ಷೆ ವರದಿಯ ಆಧಾರದ ಮೇಲೆ ಜಿಲ್ಲೆಯ ಈ 5 ತಾಲೂಕುಗಳು ಸೇರಿ ಇದುವರೆಗೆ ರಾಜ್ಯದ ಒಟ್ಟು 217 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸರ್ಕಾರ ಸೇರಿಸಿದೆ.
ಬೆಳೆ ಬಾಡಿ ನಷ್ಟದ ಹಾದಿಯಲ್ಲಿ ರೈತ: ಮಳೆ ಕೊರತೆಯಿಂದ ಜಿಲ್ಲೆಯ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ರಾಗಿ ಮತ್ತು ಭತ್ತ ಸಂಪೂರ್ಣವಾಗಿ ಬಾಡಿ ಒಣಗುತ್ತಿವೆ. ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಸಿಗದಂತಾಗಿ ರೈತರು ಕಂಗಾಲಾಗಿದ್ದಾರೆ. ಪ್ರಸಕ್ತ ಮುಂಗಾರಿನಲ್ಲಿ 63,885 ಹೆಕ್ಟರ್ ಭತ್ತ, 31,660 ಹೆಕ್ಟರ್ ಮೆಕ್ಕೆಜೋಳ, 1,691 ಹೆಕ್ಟರ್ ರಾಗಿ, 97,236 ಹೆಕ್ಟರ್ ಏಕದಳ, 97,643 ಹೆಕ್ಟರ್ ದ್ವಿದಳ ಧಾನ್ಯ, 75 ಹೆಕ್ಟರ್ ಹತ್ತಿ, 442 ಹೆಕ್ಟರ್ ವಾಣಿಜ್ಯ ಬೆಳೆಗಳು ಸೇರಿ ಒಟ್ಟಾರೆ ಶೇ.86.49ರಷ್ಟು ಬಿತ್ತನೆ ಆಗಿದೆ. ಆದರೆ ಮಳೆ ಕೊರತೆಯಿಂದ ಬಹುತೇಕ ಬೆಳೆಗಳು ಹಾನಿಗೀಡಾಗಿವೆ. ಕೆಲವು ಮೊಳಕೆ ಹೊಡೆದಿಲ್ಲ. ಇನ್ನೂ ಕೆಲವೆಡೆ ಎರಡು-ಮೂರು ಬಾರಿ ಬಿತ್ತನೆ ಮಾಡಿದರೂ ಫಸಲು ಕೈಸೇರದಂತಾಗಿದೆ. ಸಕಾಲಕ್ಕೆ ಮಳೆ ಕೈಕೊಟ್ಟ ಪರಿಣಾಮ ಅನ್ನದಾತರು ಲಕ್ಷಾಂತರ ರೂ. ಸಾಲ ಮಾಡಿ ನಷ್ಟವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಜಲಾಶಯಗಳ ಒಳಹರಿವು ಕುಸಿತ: ಮಳೆಗಾಲದಲ್ಲೂ ಆವರಿಸಿದ ಬಿರುಬಿಸಿಲು ಹಾಗೂ ಶೇಕಡಾವಾರು ಮಳೆ ಅಭಾವದಿಂದ ಜಿಲ್ಲೆಯ ಜೀವನಾಡಿಗಳಾದ ಭದ್ರಾ ಮತ್ತು ಲಿಂಗನಮಕ್ಕಿ ಜಲಾಶಯಗಳಲ್ಲಿ ನೀರಿನಮಟ್ಟ ಗಣನೀಯವಾಗಿ ಕುಸಿದಿದೆ. ಲಿಂಗನಮಕ್ಕಿ ಜಲಾಶಯಕ್ಕೆ 454 ಕ್ಯೂಸೆಕ್, ಭದ್ರಾ ಜಲಾಶಯಕ್ಕೆ 324 ಕ್ಯೂಸೆಕ್ ಹಾಗೂ ತುಂಗಾ ಜಲಜಲಾಶಯಕ್ಕೆ ಭಾನುವಾರ ಬೆಳಗ್ಗೆವರೆಗೆ 1,970 ಕ್ಯೂಸೆಕ್ ನೀರು ಮಾತ್ರ ಹರಿದುಬರುತ್ತಿದೆ. ಇದು ಭವಿಷ್ಯದಲ್ಲಿ ಕುಡಿಯುವ ನೀರು ಹಾಗೂ ನೀರಾವರಿಗೆ ದೊಡ್ಡ ಸವಾಲಾಗುವ ಭೀತಿ ಮೂಡಿಸಿದೆ.
ಪ್ರಸ್ತುತ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಗಳ ಜಂಟಿ ತಂಡವು ಬೆಳೆ ಹಾನಿಯ ನಿಖರ ಸಮೀಕ್ಷೆಯನ್ನು ಶನಿವಾರ(ಅ.3)ದಿಂದ ಆರಂಭಿಸಿದೆ. ಜಂಟಿ ಸಮೀಕ್ಷೆ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಬಳಿಕ ಜಿಲ್ಲೆಯಲ್ಲಿ ನಿಖರ ಬೆಳೆ ನಷ್ಟದ ಚಿತ್ರಣ ಸಿಗಲಿದೆ. ಒಟ್ಟಾರೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಬಳಿ ಬರ ಪರಿಹಾರಕ್ಕಾಗಿ ಅಧಿಕೃತ ಮನವಿ ಸಲ್ಲಿಸಿದ್ದು, ಕೇಂದ್ರದ ಅಧ್ಯಯನ ತಂಡವು ಪರಿಶೀಲನೆ ನಡೆಸಲಿದೆ. ಕೇಂದ್ರದ ನೆರವು ದೊರೆತರೆ ಮಾತ್ರ ಸಂಕಷ್ಟದಲ್ಲಿರುವ ಮಲೆನಾಡಿನ ರೈತರಿಗೆ ಸೂಕ್ತ ಪರಿಹಾರ ಸಿಗಲು ಸಾಧ್ಯ ಎಂಬುದು ಅಧಿಕಾರಿಗಳ ಲೆಕ್ಕಾಚಾರವಾಗಿದೆ.
ಜಿಲ್ಲೆಯಲ್ಲಿ ವಾರ್ಷಿಕವಾಗಿ ಸುಮಾರು 0.252 ಬಿಸಿಎಂ(ಬಿಲಿಯನ್ ಕ್ಯೂಬಿಕ್ ಮೀಟರ್)ನಷ್ಟು ಅಂತರ್ಜಲವನ್ನು ಕೃಷಿ ಮತ್ತು ಕುಡಿಯುವ ನೀರಿಗಾಗಿ ಹೊರತೆಗೆಯಲಾಗುತ್ತಿದೆ. ಮೂರು ದೊಡ್ಡ ಜಲಾಶಯಗಳಿದ್ದರೂ ಕೃಷಿಗೆ ಬಳಕೆ ಆಗುವ ಪ್ರಮಾಣ ಅತಿ ಕಡಿಮೆ. ಹಾಗಾಗಿ ಹೆಚ್ಚು ಅನ್ನದಾತರು ಮಳೆಆಶ್ರಿತ ಬೆಳೆಗಳಿಗೆ ಒತ್ತು ನೀಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಕಾಲುವೆ ನೀರಾವರಿ ಹೆಚ್ಚಿದ್ದರೂ ಅಡಿಕೆ ತೋಟಗಳು ಹಾಗೂ ಶಿಕಾರಿಪುರ, ಸೊರಬ, ಭದ್ರಾವತಿಯ ಕೆಲ ಭಾಗಗಳಲ್ಲಿ ಕೊಳವೆ ಬಾವಿಗಳ ಮೇಲಿನ ಅವಲಂಬನೆ ಹೆಚ್ಚಾಗಿದೆ. ಇದೀಗ ಬರ ಆವರಿಸಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಹಗಲಿರುಳು ಕೊಳವೆಬಾವಿಗಳ ಮೊರೆ ಹೋಗಿದ್ದಾರೆ. ಪರಿಣಾಮ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿಯುತ್ತಿದ್ದು, ಮುಂಗಾರು ಅಂತ್ಯಗೊಂಡ ಬೆನ್ನಲ್ಲೇ ರೈತರನ್ನು ಚಿಂತೆಗೆ ದೂಡುವಂತೆ ಮಾಡಿದೆ.
ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಶೇ.39ರಷ್ಟು ಮಳೆ ಕೊರತೆಯಾಗಿದೆ. ಇದೀಗ ಶಿವಮೊಗ್ಗ ಸೇರಿ 5 ತಾಲೂಕು ಬರ ಪೀಡಿತ ಪಟ್ಟಿಗೆ ಸೇರ್ಪಡೆ ಆಗಿವೆ. ಶನಿವಾರದಿಂದ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಜಂಟಿ ಸಮೀಕ್ಷೆ ಕೈಗೊಂಡಿದೆ. ಮುಂದೆ ಕೇಂದ್ರದ ಬರ ಅಧ್ಯಯನ ತಂಡ ಬಂದು ಬರ ಪೀಡಿತ ತಾಲೂಕುಗಳ್ಲಿ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.ಡಾ. ಎಂ.ಕಿರಣ್‌ಕುಮಾರ್, ಕೃಷಿ ಜಂಟಿ ನಿರ್ದೇಶಕ