ಅಡಿಕೆಯನ್ನು ವಿಂಗಡಣೆ ಮಾಡುವ ಕೆಲಸದಲ್ಲಿ ನಿರತರಾಗಿರುವ ಮಹಿಳೆಯರು.
- ಕೃತಕ ಬಣ್ಣದಿಂದ ಗುಣಮಟ್ಟಕ್ಕೆ ಧಕ್ಕೆ
- ಎಚ್ಚೆತ್ತುಕೊಳ್ಳದ ಕೆಲ ವರ್ತಕರು, ಚೇಣಿದಾರರು
- ಆರ್ಥಿಕತೆಗೆ ಹೊಡೆತ ಬೀಳುವ ಅಪಾಯ
ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಎಂಬುದು ಪ್ರಸಿದ್ಧ ಗಾದೆ. ಇದು ಅಡಿಕೆ (adike) ಗಿರುವ ಗೌರವ, ಮಹತ್ವದ ಸೂಚಕವೂ ಹೌದು. ಆದರೆ ಇಂದು ಅತಿಯಾದ ಲಾಭ)ದ (profit) ಆಸೆಯಿಂದ ಕೆಲವರು ಅಡಿಕೆ ಮಾನವನ್ನೇ ಹರಾಜು ಮಾಡುತ್ತಿದ್ದಾರೆ. ಇದು ಮಾರುಕಟ್ಟೆ(market) ಯಲ್ಲಿ ಕಂಪನ ಮೂಡಿಸಿದೆ.
ಪಾರಂಪರಿಕವಾಗಿ ಅಡಿಕೆ ಬೆಳೆಯುವ ಮಲೆನಾಡು ಪ್ರದೇಶದಲ್ಲಿ ತಲೆಮಾರುಗಳಿಂದಲೂ ಅಡಿಕೆಗೆ ಇನ್ನಿಲ್ಲದ ಗೌರವ. ಚಪ್ಪಲಿ ಧರಿಸಿ ಅಡಿಕೆ ಚಪ್ಪರ ಹತ್ತಲು ಕೂಡಾ ಹಿರಿಯರು ಅವಕಾಶ ನೀಡುತ್ತಿರಲಿಲ್ಲ. ದೈನಂದಿನ ಜೀವನದಲ್ಲಿ ಅಡಿಕೆ ಎಂಬುದು ಕೇವಲ ಲಾಭದ ವಸ್ತುವಾಗಿರಲಿಲ್ಲ. ಅದಕ್ಕೆ ಪೂಜನೀಯ ಸ್ಥಾನವಿತ್ತು. ಆದರೆ ಕಳೆದ ಮೂರು ದಶಕಗಳಿಂದೀಚೆಗೆ ಅಡಿಕೆ ಧಾರಣೆ ಗಗನಮುಖಿಯಾದ ಬಳಿಕ ಜನರಲ್ಲೂ ಅತಿಯಾದ ಆಸೆ ಉಂಟಾಗಿ ಅಡಿಕೆಯ ಗೌರವಕ್ಕೆ ಕುಂದು ಉಂಟು ಮಾಡುವ ಕೃತ್ಯಗಳು ಪದೇಪದೆ ನಡೆಯುತ್ತಿದೆ. ಮುಖ್ಯವಾಗಿ ಅಡಿಕೆ ಗುಣಮಟ್ಟದ ಬಗ್ಗೆಯೇ ರಾಷ್ಟ್ರ ಮಟ್ಟದಲ್ಲಿ ಸಂದೇಹಪಡುವ ಸ್ಥಿತಿ ನಿರ್ಮಾಣವಾಗಿದೆ.
ಅಡಿಕೆಯ ಮಾನ ಹರಾಜಾಗುತ್ತಿದೆ ಎಂದು 20 ವರ್ಷಗಳ ಹಿಂದೆ ಅಡಿಕೆ ಸುಲಿಯುವ ಯಂತ್ರ ಬಂದ ಸಂದರ್ಭದಲ್ಲಿ ಹಿರಿಯ ಸಹಕಾರಿ ಕೆ.ನರಸಿಂಹ ನಾಯಕ್ ಹೇಳಿದ್ದರು. ಅಡಿಕೆ ಸಂಸ್ಕರಣೆ ಯಾಂತ್ರೀಕರಣಗೊಂಡಾಗ ಕೆಲಸ ಸುಲಭವಾಯಿತು. ಆದರೆ ಗುಣಮಟ್ಟಕ್ಕೆ ಮೊದಲ ಹೊಡೆತ ಬಿದ್ದಿತು. ಈಗ ಅಡಿಕೆ ಎಂದರೆ ಕೇವಲ ರಾಶಿ ಇಡಿ ಎಂಬಂತಾಗಿದೆ. ಸರಕು, ಬೆಟ್ಟೆ ಎಲ್ಲವೂ ಇತಿಹಾಸದ ಪುಟ ಸೇರುವ ದಿನಗಳು ದೂರವಿಲ್ಲ.
ಈ ಹಂತದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ವ್ಯಾಪಕ ಮಾರುಕಟ್ಟೆ ಹೊಂದಿರುವ ಅಡಿಕೆಗೆ ಉಳಿಗಾಲವಿಲ್ಲ. ಇದರಿಂದ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುವ ಅಪಾಯವನ್ನೂ ಕಡೆಗಣಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಸಂಘಟನಾತ್ಮಕವಾಗಿ ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ.
ಅಡಿಕೆಗೆ ಕೆಟ್ಟ ಹೆಸರು ಬರಲು ಕೆಲವು ವರ್ತಕರು ಹಾಗೂ ಚೇಣಿ(ಖೇಣಿ)ದಾರರು ಕಾರಣ ಎಂಬುದು ಎಲ್ಲರೂ ತಿಳಿದಿರುವ ಸಂಗತಿ. ಬೆಳೆಗಾರರ ಹಂತದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಬೆಳೆಗಾರರ ಕೈ ಬದಲಾದ ನಂತರ ಕಾಣದ ಕೈಗಳು ಅಡಿಕೆ ಗುಣಮಟ್ಟವನ್ನು ಹಳ್ಳ ಹಿಡಿಸುತ್ತಿವೆ. ಅತಿಯಾದ ಲಾಭದ ಆಸೆಯೇ ಇದಕ್ಕೆ ಕಾರಣ. ಇಂಥವರಿಂದ ಇಡೀ ಮಾರುಕಟ್ಟೆಯೇ ಬುಡಮೇಲಾಗುತ್ತಿದೆ.
ಸಿಕ್ಕಿ ಬಿದ್ದರೂ ಬುದ್ಧಿ ಹೇಳಲಿಲ್ಲ
ಅಡಿಕೆಗೆ ಚೊಗರು (ಬಣ್ಣಕ್ಕೆ ಬಳಸುವ ನೈಸರ್ಗಿಕ ದ್ರಾವಣ) ಬದಲು ರಾಸಾಯನಿಕ ಬಳಸಿದ ಹಲವು ಪ್ರಕರಣಗಳು ಈಗಾಗಲೇ ಶಿವಮೊಗ್ಗ ಎಪಿಎಂಸಿ ಅಂಗಳದಲ್ಲೇ ನಡೆದಿವೆ. ಈ ಕೃತ್ಯ ಎಸಗಿದವರು ಸಿಕ್ಕಿಬಿದ್ದರೂ ಅವರಿಗೆ ಬುದ್ಧಿ ಹೇಳಿ ತಿದ್ದುವ, ಅವರನ್ನು ಅಡಿಕೆ ವ್ಯವಹಾರದಿಂದ ದೂರವಿಡುವ ಪ್ರಯತ್ನ ನಡೆದಿಲ್ಲ. ಹಾಗೆ ನೋಡಿದರೆ ಬೇರೆಲ್ಲ ಬೆಳೆಗಿಂತಲೂ ಅಡಿಕೆಗೆ ವ್ಯಾಪಕ ರಕ್ಷಣಾ ವಲಯವಿದೆ. ರಾಜಕೀಯವನ್ನೇ ಬದಲಿಸುವ ಶಕ್ತಿಯಿದೆ. ಆದರೆ ಗುಣಮಟ್ಟದಲ್ಲಿ ಲೋಪದಿಂದ ಈ ಶಕ್ತಿ ನಶಿಸಿ ಹೋಗುತ್ತಿದೆ.
ಕಳಪೆ ಅಡಿಕೆ ಪ್ರಕರಣಕ್ಕೆ ತೇಪೆ
ಗುಣಮಟ್ಟದ ಅಡಿಕೆಗೆ ಪ್ರಸಿದ್ಧವಾದ ಪ್ರಮುಖ ಅಡಕೆ ಮಾರುಕಟ್ಟೆಯೂ ಆಗಿರುವ ಶಿವಮೊಗ್ಗದಲ್ಲಿ 2021ರಲ್ಲಿ ಕಳಪೆ ಅಡಕೆ ಬಳಸಿಕೊಂಡಿದ್ದ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ವರ್ತಕರೊಬ್ಬರು ಇಲ್ಲಿಂದ ಕಳುಹಿಸಿದ್ದ 71 ಲಕ್ಷ ರೂ. ಮೌಲ್ಯದ ಒಂದು ಲಾರಿ ಲೋಡ್ ಅಡಿಕೆಯನ್ನು ಗುಜರಾತ್‌ನ ಗುಟ್ಖಾ ಕಂಪನಿಯೊಂದು ಹಿಂದಕ್ಕೆ ಕಳುಹಿಸಿತ್ತು. ಇದಕ್ಕೆ ಕಳಪೆ ಅಡಕೆ ಮಿಶ್ರಣವೇ ಕಾರಣ ಎಂದು ಕಂಪನಿ ತಿಳಿಸಿತ್ತು. ಕೆಲ ದಿನಗಳ ಹಿಂದೆ ಅದೇ ವರ್ತಕರು ಅಸ್ಸಾಂನಿಂದ ಒಂದು ಲೋಡ್ ಅಡಿಕೆ ಆಮದು ಮಾಡಿಕೊಂಡಿದ್ದರು. ಮತ್ತೋರ್ವ ವರ್ತಕರು ಪಶ್ಚಿಮ ಬಂಗಾಳ ಹಾಗೂ ಕೇರಳದಿಂದ ತಲಾ ಒಂದು ಲೋಡ್ ಅಡಿಕೆ ತರಿಸಿದ್ದು ಬೆಳಕಿಗೆ ಬಂದಿತ್ತು. ಆದರೆ ಇಡೀ ಪ್ರಕರಣಗಳಿಗೆ ತೇಪೆ ಹಚ್ಚಿ ಇತಿಶ್ರೀ ಹಾಡಲಾಗಿತ್ತು.
ಎರಡು ವರ್ಷಗಳ ಹಿಂದೆ ಶಿವಮೊಗ್ಗ ಎಪಿಎಂಸಿ ಆವರಣದಲ್ಲೇ ಅಡಿಕೆಗೆ ಕೃತಕ ಬಣ್ಣ ಸೇರಿಸುವ ಕೃತ್ಯವೊಂದು ಬಹಿರಂಗವಾಗಿತ್ತು ವರ್ತಕರೊಬ್ಬರು ಸಾರ್ವಜನಿಕವಾಗಿ ಮೂಟೆಗಟ್ಟಲೆ ಅಡಿಕೆಗೆ ಕೃತಕ ಬಣ್ಣ ಹಾಕಿಸಿದ ಸಂಗತಿ ಎಪಿಎಂಸಿ ವಲಯದಲ್ಲಿ ಸಂಚಲನ ಮೂಡಿಸಿತ್ತು. ಎಲ್ಲರೂ ಚೇಣಿ(ಖೇಣಿ)ದಾರರತ್ತ ಬೊಟ್ಟು ಮಾಡುತ್ತಿದ್ದ, ಕೆಲ ಅಡಿಕೆ ಬೆಳೆಗಾರರೇ ಕಳಪೆ ಅಡಿಕೆಯನ್ನು ಮಾರುಕಟ್ಟೆಗೆ ಕಳಿಸುತ್ತಿದ್ದಾರೆ ಎಂಬ ಆರೋಪದ ಮಧ್ಯೆ ವರ್ತಕರೊಬ್ಬರು ರಾಸಾಯನಿಕ ಬಣ್ಣ ಹಾಕುತ್ತಿರುವುದು ಬಹಿರಂಗವಾಗಿತ್ತು. ಒಂದು ವೇಳೆ ಅಡಿಕೆ ಗುಣಮಟ್ಟ ಸರಿಯಿಲ್ಲ ಎಂಬುದು ಕಂಡುಬಂದರೆ ಅದನ್ನು ಸಂಬಂಧಿಸಿದ ಬೆಳೆಗಾರರಿಗೆ ಮರಳಿಸಬಹುದು. ಇಲ್ಲವೇ ಸಾಂಪ್ರದಾಯಿಕವಾಗಿ ಅಡಿಕೆಯನ್ನು ಚೊಗರಿಗೆ ಹಾಕಿ ನಂತರ ಒಣಗಿಸಿ ಸಂಸ್ಕರಿಸಬಹುದು. ಇದನ್ನು ಬಿಟ್ಟು ರಾಸಾಯನಿಕ ಹಾಕಿದರೆ ಅಡಕೆಯ ಮೂಲ ಗುಣ ಹಾಗೂ ರುಚಿ ಇಲ್ಲವಾಗುತ್ತದೆ.
ಶಿವಮೊಗ್ಗ ಎಪಿಎಂಸಿಯಲ್ಲಿ ದೊಡ್ಡ ಡ್ರಮ್‌ಗಳಲ್ಲಿ ಅಕ್ರಿಸಾಲ್-150 ಎಂಬ ರಾಸಾಯನಿಕ ಬಣ್ಣವನ್ನು ಹಾಕಿ ಅದರಲ್ಲಿ ಅಡಿಕೆಯನ್ನು ಅದ್ದುತ್ತಿದ್ದ ದೃಶ್ಯ ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಿತ್ತು. ಅಕ್ರಿಸಾಲ್ ಎಂಬುದು ಒಂದು ಬಗೆಯ ದ್ರಾವಣ. ಇದನ್ನು ಅಡಿಕೆಗೆ ಬಳಸುವುದರಿಂದ ನುಣುಪು ಹೆಚ್ಚುತ್ತದೆ. ಇದು ಬಣ್ಣ ಹಾಗೂ ವಸ್ತು ಪರಸ್ಪರ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ. ಗಾಜು ಹಾಗೂ ನುಣುಪಾದ ವಸ್ತುಗಳ ಮೇಲ್ಪದರವನ್ನು ಸ್ವಚ್ಛಗೊಳಿಸಲು ಇದನ್ನು ಬಳಸಲಾಗುತ್ತದೆ.
"
ಅಡಿಕೆಗೆ ಕೃತಕ ಬಣ್ಣ ಬಳಸುವುದರಿಂದ ಮಾರುಕಟ್ಟೆಯಲ್ಲಿ ಸಮಸ್ಯೆಯಾಗುತ್ತದೆ. ಅಡಿಕೆ ಧಾರಣೆಯೂ ಕಡಿಮೆಯಾಗುತ್ತದೆ. ಈಗಾಗಲೇ ಅದರ ಬಿಸಿ ಮುಟ್ಟಿದೆ. ಅಡಿಕೆ ಬೆಳೆಗಾರರ ಹಿತ ಕಾಯಲು ಮಾರಾಟ ಮಹಾಮಂಡಲ ಬದ್ಧವಾಗಿದೆ. ಚೇಣಿ(ಖೇಣಿ)ದಾರರು ಹಾಗೂ ವರ್ತಕರು ಗುಣಮಟ್ಟ ಕಾಯಲು ಸಹಕಾರ ನೀಡಬೇಕು.
— ಆರಗ ಜ್ಞಾನೇಂದ್ರ, ರಾಜ್ಯ ಅಡಿಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಳದ ಅಧ್ಯಕ್ಷ