ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಜತೆಗೆ ಕುಮಾರ್ ಸಾಗರ್. 
ಶಿವಮೊಗ್ಗ

ಪೋಲೋ ವಾಲ್ಟ್ನಲ್ಲಿ ಮಲೆನಾಡ ಪ್ರತಿಭೆ ಸಾಧನೆ | polo vault

ಹೊಸನಗರ: ಬೆಂಗಳೂರಿನಲ್ಲಿ ನಡೆದ 17 ವರ್ಷದೊಳಗಿನವರ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪಟ್ಟಣದ ಮಲೆನಾಡು ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿ ಕುಮಾರ್ ಸಾಗರ್ ಪೋಲೋ ವಾಲ್ಟ್ ಕ್ರೀಡೆಯಲ್ಲಿ 3.15 ಮೀಟರ್ ಎತ್ತರ ಜಿಗಿದು ಹೊಸ ದಾಖಲೆ ಸೃಷ್ಟಿಸಿದ್ದಾನೆ.
ರಾಜ್ಯದಲ್ಲಿ  ದಾಖಲಾದ ಇದುವರೆಗಿನ 2.80 ಮೀಟರ್ ಎತ್ತರ ಜಿಗಿತದ ದಾಖಲೆಯನ್ನು ಕುಮಾರ್ ಸಾಗರ್ ಮುರಿದು ಚಿನ್ನದ ಪದಕ ಪಡೆದಿದ್ದಾನೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಭಾನುವಾರ ಆರಂಭವಾದ ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾನೆ.
 ಕುಮಾರ್ ಸಾಗರ್ ಎಂ.ಗುಡ್ಡೆಕೊಪ್ಪ ಗ್ರಾಮದ ಮಮತಾ ಹಾಗೂ ಸದಾನಂದ್ ಅವರ ಪುತ್ರ. ಈತನ ಸಾಧನೆಯಲ್ಲಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎಲ್.ಸುರೇಶ್ ಅವರ ಪಾತ್ರ ಸಾಕಷ್ಟಿದೆ. ಪ್ರಾಥಮಿಕ ಶಾಲೆಯಲ್ಲಿಯೇ ಆಟ, ಓಟವನ್ನು ಮೈಗೊಡಿಸಿಕೊಂಡು ಬೆಳೆದ ಕುಮಾರ್ ಸಾಗರ್ ಮಲೆನಾಡು ಪ್ರೌಢಶಾಲೆಗೆ ಸೇರುವಾಗ ಭರವಸೆಯ ಆಟಗಾರನಾಗಿ ಗುರುತಿಸಿಕೊಂಡ. ಶಿಕ್ಷಕ ಸುರೇಶ್ ಅವರು ಇವನಲ್ಲಿದ್ದ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿದರು. ಮಲೆನಾಡು ಪ್ರದೇಶದಲ್ಲಿ ಅಷ್ಟೇನೂ ಪರಿಚಯವಿಲ್ಲದ ಪೋಲೋ ವಾಲ್ಟ್ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಪ್ರದರ್ಶಿಸುವಲ್ಲಿ ಆಧಾರವಾಗಿ ನಿಂತರು.
ಗ್ರಾಮೀಣ ಭಾಗದಲ್ಲಿ ಪೋಲೋ ವಾಲ್ಟ್ ಕ್ರೀಡೆ ಅಭ್ಯಾಸ ಮಾಡುವ ಯಾವುದೇ ಸಾಧನೆ, ಸಲಕರಣೆ ಇಲ್ಲ. ಶಾಲೆಯಲ್ಲಿ ಲಭ್ಯವಿರುವ ಸಲಕರಣೆಯಿಂದ ಹೆಚ್ಚಿನ ಅಭ್ಯಾಸ ಮಾಡಿಸಲಾಗಿತ್ತು. ತಾಪಂ ಇಒ ನರೇಂದ್ರಕುಮಾರ್ ಅವರು ಕ್ರೀಡೆ ಅಭ್ಯಾಸಕ್ಕಾಗಿ 1 ಲಕ್ಷ ರೂ. ಅನುದಾನ ನೀಡಿದ್ದರು. ಇದು ಅಭ್ಯಾಸಕ್ಕೆ ಅನುಕೂಲವಾಗಿದೆ ಎನ್ನುತ್ತಾರೆ ಮಲೆನಾಡು ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎಲ್.ಸುರೇಶ್.
"

ಪೋಲೋ ವಾಲ್ಟ್ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಬೇಕೆಂಬ ಆಸೆ ನನಗಿತ್ತು. ನನ್ನ ಆಸೆಗೆ ಸುರೇಶ ಮಾಸ್ಟರ್ ಶಕ್ತಿಮೀರಿ ಸಹಕರಿಸಿದ್ದಾರೆ. ಅವರು ನನ್ನಲ್ಲಿ ಬಹಳ ವಿಶ್ವಾಸ ಇಟ್ಟಿದ್ದರು. ಹೊಸ ದಾಖಲೆ ಸೃಷ್ಟಿ ಮಾಡಿದ್ದು ಖುಷಿಯಾಗಿದೆ.