- ತಾಲೂಕು ಮಟ್ಟದ ಅಧಿಕಾರಿಗಳಿಗೆ ಆನ್ಲೈನ್ ಸಭೆ
- ಬರ ನಿರ್ವಹಣೆಗೆ ಸಿದ್ಧತೆ ನಡೆಸಿ
ಸೊರಬ: ತಾಲೂಕಿನಲ್ಲಿ ಎದುರಾಗಬಹುದಾದ ಬರದ ಪರಿಸ್ಥಿತಿ ಎದುರಿಸಲು ಇಲಾಖಾವಾರು ಸಿದ್ಧತೆ ನಡೆಯಬೇಕು ಎಂದು ಶಾಸಕ ಮಧು ಬಂಗಾರಪ್ಪ ಅಧಿಕಾರಿಗಳಿಗೆ ತಿಳಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ತಾಲೂಕು ಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಿದ್ದ ತಾಲೂಕಿನ ಪ್ರಕೃತಿ ವಿಕೋಪ ನಿರ್ವಹಣೆಯ ಆನ್ಲೈನ್ ಸಭೆಯಲ್ಲಿ ಮಾತನಾಡಿದರು.
ಈಗಾಗಲೇ ತಾಲೂಕಿನಲ್ಲಿ ಮುಂಗಾರು ಮಳೆಯ ಕೊರತೆಯಾಗಿದೆ. ಮುಂದಿನ ದಿನದಲ್ಲಿ ಬರಗಾಲವನ್ನು ಹೇಗೆ ಎದುರಿಸಬೇಕು ಎಂಬುದಕ್ಕೆ ಎಲ್ಲ ಇಲಾಖೆಯವರು ರೂಪುರೇಷೆ ಮತ್ತು ಕ್ರಿಯಾಯೋಜನೆ ತಯಾರಿಸಬೇಕು ಎಂದರು.
ಇದುವರೆಗೆ ತಾಲೂಕಿನಲ್ಲಿ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಿರಿ. ಮುಂದೆ ಮಳೆ ಕಡಿಮೆಯಾದರೆ ಮತ್ತಷ್ಟು ಸಮಸ್ಯೆ ಎದುರಾಗಬಹುದು. ಆದ್ದರಿಂದ ಕುಡಿಯುವ ನೀರು, ಬೆಳೆಗಳ ರಕ್ಷಣೆ, ಜಾನುವಾರುಗಳ ರಕ್ಷಣೆ, ವಿದ್ಯುತ್ ಸಮಸ್ಯೆಯ ನಿರ್ವಹಣೆ, ಕೆರೆಗಳ ನೀರಿನ ರಕ್ಷಣೆ ಸೇರಿದಂತೆ ಸಮಗ್ರ ರೂಪುರೇಷೆಗಳನ್ನು ಸಂಬಂಧಿಸಿದ ಇಲಾಖೆಯವರು ಸಿದ್ಧಪಡಿಸಿಕೊಳ್ಳಬೇಕು. ಇತರೆ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದರು.
ತಹಸೀಲ್ದಾರ್ ಕೆ.ಪುರಂದರ, ಇಒ ಕೆ.ಆರ್.ಶಶಿಧರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಜಿ.ಕುಮಾರ, ಸಹಾಯಕ ಅಭಿಯಂತರಾದ ಮುರುಘಾ, ಕಿರಣ್ಕುಮಾರ, ಮೆಸ್ಕಾಂ ಎಇಇ ಸತ್ಯಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಚಂದನ್, ನಾಗರಾಜ ಅಣ್ವೇಕರ್ ಇತರರಿದ್ದರು.