ಆನವಟ್ಟಿಯಲ್ಲಿ ಧರ್ಮಸ್ಥಳ ಯೋಜನೆಯಿಂದ ಆಯೋಜಿಸಿದ್ದ ಮೃತ್ಯುಂಜಯ ಹೋಮ, ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಶ್ರೀ ಮಹಾಂತ ಸ್ವಾಮೀಜಿ, ಜಯಂತಿ, ದಿನೇಶ್ ನಾಯ್ಕ, ಪ್ರವೀಣಕುಮಾರ್ ಇತರರಿದ್ದರು.
ಆನವಟ್ಟಿ (ಸೊರಬ): ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳನ್ನು ಕಡೆಗಣಿಸುವ ಕಾಲವಿತ್ತು. ಆದರೆ ಇಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಹಾಗಾಗಿ ಹೆಣ್ಣು ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸಿ, ಸಂಸ್ಕಾರ ನೀಡುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಆನವಟ್ಟಿಯ ದುರ್ಗಾಂಬ ದೇವಸ್ಥಾನದ ಆವರಣದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಜನ್ಮದಿನದ ಅಂಗವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸ್ವ-ಸಹಾಯ ಸಂಘಗಳ ಒಕ್ಕೂಟದಿಂದ ಆಯೋಜಿಸಿದ್ದ ಮೃತ್ಯುಂಜಯ ಹೋಮ ಹಾಗೂ ಸಹಸ್ರ ಬಿಲ್ವಾರ್ಚನೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೀರೇಂದ್ರ ಹೆಗ್ಗಡೆ ಅವರು ರಾಜ್ಯದ ಪ್ರತಿ ಹಳ್ಳಿ ಹಾಗೂ ಅಲ್ಲಿನ ಪ್ರತಿಯೊಬ್ಬ ಲಾನುಭವಿಗಳು ಅಭಿವೃದ್ಧಿ ಹೊಂದಬೇಕು ಎಂಬ ಮಹತ್ವಾಕಾಂಕ್ಷೆ ಇಟ್ಟುಕೊಂಡು ಧರ್ಮಸ್ಥಳ ಸ್ವ ಸಹಾಯ ಸಂಘವನ್ನು ಸ್ಥಾಪಿಸಿದ್ದಾರೆ. ಅದರ ಪ್ರತಿಲವಾಗಿ ರಾಜ್ಯಾದ್ಯಂತ ಪ್ರತಿ ಹಳ್ಳಿಯಲ್ಲೂ ಅವರ ಸೇವೆ ತಲುಪಿದೆ. ಮಹಿಳೆಯರು ಸ್ವಾವಲಂಬಿಯಾಗಿದ್ದಾರೆ ಎಂದರು.
ಸಂಘದ ಜಿಲ್ಲಾ ನಿರ್ದೇಶಕ ಎಂ.ದಿನೇಶ್ ಮಾತನಾಡಿ, ಗ್ರಾಮಗಳ ಅಭಿವೃದ್ಧಿ ಆಗಬೇಕು ಎಂಬ ಉದ್ದೇಶದಿಂದ ಸ್ವ ಸಹಾಯ ಸಂಘಗಳ ಮುಖಾಂತರ ಸಾಲ ಸೌಲಭ್ಯ ನೀಡುತ್ತಿದ್ದು, ಜನರು ಸದ್ಬಳಕೆ ಮಾಡಿಕೊಂಡಿದ್ದಾರೆ. ಡಾ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದಿಂದ ಇಂದು ರಾಜ್ಯಾದ್ಯಂತ 6.50 ಲಕ್ಷ ಸಂಘಗಳನ್ನು ಸ್ಥಾಪಿಸಿದ್ದೇವೆ. ಆನವಟ್ಟಿ ಭಾಗದ ಸಂಘಗಳು ಶೇ.100 ರಷ್ಟು ಸಾಲ ಮರುಪಾವತಿ ಮಾಡಿದ್ದು, ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ ಎಂದು ತಿಳಿಸಿದರು.
ಜಡೆ ಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ವೀರೇಂದ್ರ ಹೆಗ್ಗಡೆ ಅವರು ಒಬ್ಬ ಪರಿಪೂರ್ಣ ವ್ಯಕ್ತಿ. ಅವರು ಅಕ್ಷರ ಹಾಗೂ ಅನ್ನ ದಾಸೋಹದಂತಹ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಹಿಂದು ಧರ್ಮದಲ್ಲಿ ಮೃತ್ಯುಂಜಯ ಪೂಜೆಗೆ ಹೆಚ್ಚಿನ ಮಹತ್ವವಿದೆ. ಹಾಗೆಯೇ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಪ್ರಾರ್ಥಿಸಬೇಕು.
ಸಂಘದಿಂದ ಕೆಲವು ಲಾನುಭವಿಗಳಿಗೆ ಗೃಹೋಪಯೋಗಿ ಕಿಟ್‌ಗಳನ್ನು ವಿತರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಧರ್ಮಸ್ಥಳ ತಾಲೂಕು ಯೋಜನಾಧಿಕಾರಿ ಜಯಂತಿ, ಆನವಟ್ಟಿ ವಲಯ ಮೇಲ್ವಿಚಾರಕ ದಿನೇಶ್ ನಾಯ್ಕ, ಪ್ರವೀಣಕುಮಾರ್, ಪ್ರಮುಖರಾದ ಚಂದ್ರಶೇಖರ್ ಪಾಟೀಲ್, ಉಮೇಶ ಉಡುಗಣಿ, ಭರ್ಮ ಗೌಡ, ಶ್ರೀನಾಥ್ ಮಡ್ಡಿ, ಸುಧಾ ಶಿವಪ್ರಸಾದ್, ವಿಜಯ್‌ಕುಮಾರ್, ಬಾಬು ಸಾಬ್, ಮೃತ್ಯುಂಜಯ ಇತರರಿದ್ದರು.