ಸಾಗರದಲ್ಲಿ ಏರ್ಪಡಿಸಿದ್ದ ನಾದವೈಭವ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತಬಲ ವಾದಕ ಪಂಡಿತ್ ಮಡಿವಾಳಯ್ಯ ಸಾಲಿ ಅವರನ್ನು ಸನ್ಮಾನಿಸಲಾಯಿತು. ಮೈತ್ರಿ ಪಾಟೀಲ್, ವಿದುಷಿ ಚೇತನ ರಾಜೀವ್, ಡಾ. ರಾಘವೇಂದ್ರ, ಜಿ.ಆರ್.ಪಂಡಿತ್ ಇತರರಿದ್ದರು.
ಸಾಗರ: ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಉಳಿಸುವುದಕ್ಕೆ ಮಕ್ಕಳನ್ನು ಸಾಧ್ಯವಾದಷ್ಟು ಮೊಬೈಲ್ನಿಂದ ದೂರವಿಡುವ ಪ್ರಯತ್ನ ಮಾಡಬೇಕು. ಜತೆಗೆ ನಾಡಿನ ಪರಂಪರೆಯನ್ನು ಅವರಿಗೆ ತಿಳಿಸುವುದು ಮುಖ್ಯ ಎಂದು ನಗರಸಭೆ ಮಾಜಿ ಅಧ್ಯಕ್ಷೆ ಮೈತ್ರಿ ವಿ. ಪಾಟೀಲ್ ಹೇಳಿದರು.
ಸಾಗರದ ಅಜಿತ ಸಭಾಭವನದಲ್ಲಿ ತೇಜಸ್ವಿ ತಬಲಾ ವಿದ್ಯಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಏರ್ಪಡಿಸಿದ್ದ 14ನೇ ವರ್ಷದ ನಾದವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನೋವೈದ್ಯ ವಿನಾಯಕ ಹೆಗಡೆ ಮಾತನಾಡಿ, ಮನೋರೋಗಕ್ಕೂ ಸಂಗೀತ ಮದ್ದು ಎನ್ನುವ ಸತ್ಯ ಕಂಡುಹಿಡಿಯಲಾಗಿದೆ. ಹಾಗಾಗಿ ಕಲೆ ಎನ್ನುವುದು ಮನರಂಜನೆಗೆ ಮಾತ್ರ ಸೀಮಿತವಲ್ಲ. ಅದು ಆರೋಗ್ಯಕ್ಕೂ ಪೂರಕ ಎಂದರು.
ತೇಜಸ್ವಿ ತಬಲ ವಿದ್ಯಾಲಯದ ಪ್ರಾಧ್ಯಾಪಕಿ ಚೇತನಾ ರಾಜೀವ್ ರಾವ್ ಮಾತನಾಡಿ, ಸಂಗೀತ ಶಾಲೆ ಮುನ್ನಡೆಸುವುದು ಸುಲಭದ ಕೆಲಸವಲ್ಲ. ಎಲ್ಲರ ಸಹಕಾರ ಸಿಕ್ಕಾಗ ಇಂತಹ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸಾಧ್ಯ. ಮಕ್ಕಳಲ್ಲಿರುವ ಪ್ರತಿಭೆಯನ್ನು ಅಭಿವ್ಯಕ್ತಗೊಳಿಸಲು ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತಬಲ ವಾದಕ ಪಂಡಿತ್ ಮಡಿವಾಳಯ್ಯ ಸಾಲಿ ಅವರನ್ನು ಸನ್ಮಾನಿಸಲಾಯಿತು. ಮಮತಾ, ಸತ್ಯವತಿ, ರಚನಾ ಇತರರಿದ್ದರು. ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಯನ, ಡಾ. ಕಿಶನ್ ಭಾಗವತ್ ಅವರಿಂದ ತಬಲಾ ಸೋಲೋ ಮತ್ತು ವಿ. ಅಕ್ಷರ ಇಂದ್ರ, ಮೇಘಾ ರಾವ್, ಶ್ವೇತಾ ರಾವ್, ಶ್ರೀರಾಮ ಮತ್ತವರ ತಂಡದಿಂದ ಕಾರ್ಯಕ್ರಮ ಜರುಗಿತು. ಎಂ.ಪಿ.ಹೆಗಡೆ ಅವರು ಹಿಂದುಸ್ತಾನಿ ಸಂಗೀತ ಪ್ರಸ್ತುತಪಡಿಸಿದರು.