ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಭದ್ರಾವತಿಯಲ್ಲಿ ಹಿಂದೂ-ಮುಸ್ಲಿಂ ಸಮಾಜದ ಮುಖಂಡರೊಂದಿಗೆ ಪೊಲೀಸ್ ಅಧಿಕಾರಿಗಳು ಶಾಂತಿಸಭೆ ನಡೆಸಿದರು. ಪ್ರಕಾಶ್ ರಾಥೋಡ್, ನಾಗಮ್ಮ, ಚಿದಾನಂದ್, ಶಿವಪ್ರಸಾದ್ ಇತರರಿದ್ದರು.
ಭದ್ರಾವತಿ: ಎಲ್ಲ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದದಿಂದ ಆಚರಿಸಬೇಕು. ಶಾಂತಿ ಕದಡಲು ಯತ್ನಿಸುವ ಕಿಡಿಗೇಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭದ್ರಾವತಿ ಡಿವೈಎಸ್ಪಿ ಪ್ರಕಾಶ್ ರಾಥೋಡ್ ತಿಳಿಸಿದರು.
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ವಿವಿಧ ಧರ್ಮಗಳ ಮುಖಂಡರೊಂದಿಗೆ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ತ್ಯಾಗ, ಪ್ರೀತಿ, ಬಲಿದಾನದ ಸಂಕೇತವಾಗಿರುವ ಹಬ್ಬವನ್ನು ಶಾಂತಿಯಿಂದ ಆಚರಿಸೋಣ. ಎಲ್ಲ ಧರ್ಮಗಳ ಮೂಲ ಒಂದೇ. ಆದರೆ ಆಚರಣೆ ಮಾತ್ರ ಬೇರೆಯಾಗಿರುತ್ತದೆ ಎಂದರು.
ಹಬ್ಬದ ಸಂದರ್ಭ ಶಾಂತಿ ಸುವ್ಯವಸ್ಥೆ ಕಾಪಾಡುವುದು ಎಲ್ಲರ ಜವಾಬ್ದಾರಿ. ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು. ಎಂಥದ್ದೇ ಸಮಸ್ಯೆ ಎದುರಾದರೂ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕೇ ಹೊರತು, ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ತಿಳಿಸಿದರು.
ಅಂಜುಮನ್ ಸಮಿತಿ ಅಧ್ಯಕ್ಷ ಅಯೂಬ್ ಖಾನ್ ಮಾತನಾಡಿ, ಕರ್ನಾಟಕ ಸರ್ವ ಧರ್ಮೀಯರಿಗೆ ಆಶ್ರಯ ನೀಡಿದ ರಾಜ್ಯ. ಯಾವುದೇ ಧರ್ಮಕ್ಕೆ ನೋವು ಉಂಟುಮಾಡದೆ ಸರ್ವರ ಒಳಿತಿಗಾಗಿ ಪ್ರಾರ್ಥಿಸುವುದೇ ಬಕ್ರೀದ್ ಹಬ್ಬದ ಉದ್ದೇಶ ಎಂದರು.
ವಿಶ್ವ ಹಿಂದೂ ಪರಿಷತ್, ಬಜರಂಗದಳದ ಮುಖಂಡ ವಡಿವೇಲು ಮಾತನಾಡಿ, ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಕುರಿ, ಕೋಳಿ ಬಲಿ ಕೊಡಿ. ಆದರೆ ಹಿಂದೂಗಳು ನಿತ್ಯಪೂಜಿಸುವ ಗೋಮಾತೆಯನ್ನು ಮಾತ್ರ ಬಲಿ ಕೊಡಬೇಡಿ. ಈ ಹಿಂದೆ ಗೋಹತ್ಯೆ ಘಟನೆಗಳು ನಡೆದಿರುವ ಬಗ್ಗೆ ಪೊಲೀಸ್ ಇಲಾಖೆ ಗಮನಕ್ಕೂ ತರಲಾಗಿದೆ ಎಂದು ಹೇಳಿದರು.
ನಗರಸಭೆ ಉಪಾಧ್ಯಕ್ಷ ಬಷೀರ್ ಅಹಮದ್ ಮಾತನಾಡಿ, ಹಬ್ಬದ ದಿನ ಪರಿಸರಕ್ಕೆ ಹಾನಿಯಾಗದಂತೆ ಸ್ವಚ್ಛತೆ ಕಾಪಾಡಲಾಗುವುದು. ಗೋಹತ್ಯೆ ಮಾಡಿದವರಿಗೆ ಶಿಕ್ಷೆ ವಿಧಿಸುವಂತೆ ನಾವೂ ಸಹ ಆಗ್ರಹಿಸುತ್ತೇವೆ. ಆದರೆ ಪದೇಪದೆ ಒಂದು ಸಮುದಾಯವನ್ನು ಗುರಿಯಾಗಿಸುವುದು ಸರಿಯಲ್ಲ ಎಂದರು.
ನಗರಸಭೆ ನಾಮನಿರ್ದೇಶಿತ ಸದಸ್ಯ ದಿಲ್ದಾರ್, ಪ್ರಮುಖರಾದ ಪೀರ್ ಷರೀಫ್, ಮಂಜುನಾಥ ರಾವ್, ಚನ್ನೇಶ್, ಪೊಲೀಸ್ ಅಧಿಕಾರಿಗಳಾದ ನಾಗಮ್ಮ, ಚಿದಾನಂದ್, ಶಿವಪ್ರಸಾದ್, ಹಳೇನಗರ ಠಾಣೆ ಪಿಎಸ್‌ಐ ಸುನೀಲ್ಕುಮಾರ್ ತೇಲಿ, ಹೊಸಮನೆ ಠಾಣೆ ಪಿಎಸ್‌ಐ ಸಿದ್ದಪ್ಪ, ನ್ಯೂಟೌನ್ ಠಾಣೆ ಪಿಎಸ್‌ಐ ರಮೇಶ್, ಪಿಎಸ್‌ಐ ಕವಿತಾ ಇತರರಿದ್ದರು.