ಕಲ್ಮನೆ ಗ್ರಾಮದಲ್ಲಿ ಬೇಡಕ ಕಣ್ಣಪ್ಪ ದೇವಾಲಯವನ್ನು ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಉದ್ಘಾಟಿಸಿದರು. ಸತೀಶ್ ಜಾರಕಿಹೊಳಿ, ಬಿ.ವೈ.ರಾಘವೇಂದ್ರ, ಪಲ್ಲವಿ, ನಾಗರಾಜ ಗೌಡ, ಲೋಕೇಶ್ ಇತರರಿದ್ದರು. 
ಶಿವಮೊಗ್ಗ

ಮಹರ್ಷಿ ವಾಲ್ಮೀಕಿ ದೈವಸದೃಶ ವ್ಯಕ್ತಿ | Temple inauguration

ಶಿಕಾರಿಪುರ: ಧಾರ್ಮಿಕ ಆಚರಣೆಗಳು, ಸಂಪ್ರದಾಯಗಳು ಈ ಮಣ್ಣಿನ ಸಂಸ್ಕೃತಿಯ ಶ್ರೇಷ್ಠತೆಯ ಸಾಕ್ಷಿರೂಪ. ವಾಲ್ಮೀಕಿ ನಮಗೆ ರಾಮಾಯಣವನ್ನು ನೀಡಿದ ದೈವಸದೃಶ ಮಹರ್ಷಿ ಎಂದು ರಾಜನಹಳ್ಳಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
ತಾಲೂಕಿನ ಕಲ್ಮನೆ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಸಮಾಜ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ, ಬೇಡರ ಕಣ್ಣಪ್ಪ ಶಿಲಾ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ನೂತನ ದೇವಾಲಯ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ವಾಲ್ಮೀಕಿ ಸಮುದಾಯವು ತನ್ನದೇ ಆದ ವಿಶಿಷ್ಟ ಆಚರಣೆಗಳಿಂದ ಜನಜನಿತವಾಗಿದೆ ಎಂದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ನಾವು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಸಾಕ್ಷರ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆಯಾಗಬೇಕು. ಶಾಲೆಗಳಿಗೆ ದೇಗುಲದಷ್ಟೇ ಮಹತ್ವ ನೀಡಬೇಕು. ಹೆಚ್ಚು ಹೆಚ್ಚು ಶಾಲೆಗಳ ನಿರ್ಮಾಣ ನಮ್ಮ ಸಂಕಲ್ಪವಾಗಲಿ ಎಂದು ತಿಳಿಸಿದರು.
ಅಭಿವೃದ್ಧಿ ವಿಚಾರದಲ್ಲಿ ಪಕ್ಷಪಾತಕ್ಕೆ ಅವಕಾಶ ನೀಡುವುದಿಲ್ಲ. ಜನತೆಯ ಆಶೋತ್ತರಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಗಳಾದ ನಮ್ಮ ಕರ್ತವ್ಯ. ಅಭಿವೃದ್ಧಿ ಕಾರ್ಯಗಳಾಗುವಾಗ ಸಣ್ಣಪುಟ್ಟ ಲೋಪಗಳಾಗುವುದು ಸಹಜ. ಕುಟ್ರಳ್ಳಿ ಬಳಿಯಿರುವ ಟೋಲ್ ಸ್ಥಳಾಂತರಿಸಲು ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ ಸೇರಿ ಹಲವರು ಮನವಿ ಮಾಡಿದ್ದಾರೆ. ಸ್ಥಳಾಂತರಿಸುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ ಸ್ಥಳಾಂತರಿಸಲು ಪ್ರಯತ್ನಿಸುತ್ತೇನೆ.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ವಾಲ್ಮೀಕಿ ಸಮಾಜ ಅತ್ಯಂತ ಸ್ವಾಭಿಮಾನಿ, ಪರಿಶ್ರಮಿ, ಶೌರ್ಯಕ್ಕೆ ಪ್ರತೀಕವಾದ ಸಮಾಜ. ಇಂತಹ ಸಮಾಜದ ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಮೊದಲು ಆಚರಿಸಲು ಅನುವು ಮಾಡಿಕೊಟ್ಟವರು ಮತ್ತು ಸರ್ಕಾರಿ ರಜೆ ಘೋಷಿಸಿದವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ತಿಳಿಸಿದರು.
ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ನಗರದ ಮಹದೇವಪ್ಪ, ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ, ಸ್ವಾಗತ ಸಮಿತಿ ಅಧ್ಯಕ್ಷ ಲೋಕೇಶ್ ಕಲ್ಮನೆ, ವಿಗ್ರಹದಾನಿ ಬಿ.ಕೆ.ಮಂಜಪ್ಪ, ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್, ಎಸ್.ಪಿ.ನಾಗರಾಜ ಗೌಡ, ಉದ್ಯಮಿ ಎನ್.ವಿ.ಈರೇಶ್, ಅಲೆಮಾರಿ ಅಭಿವೃದ್ಧಿ ನಿಗಮದ ಪಲ್ಲವಿ, ರಮೇಶ್, ಉಮೇಶ್ ಇತರರಿದ್ದರು.