ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಜೈನಮಠದಲ್ಲಿ ಮಹಾ ರಥೋತ್ಸವದಲ್ಲಿ ಭಾಗಿಯಾಗಿದ್ದ ಭಕ್ತಸಮೂಹ. 
ಶಿವಮೊಗ್ಗ

ಹುಂಚ ಜೈನಮಠದಲ್ಲಿ ಮಹಾರಥೋತ್ಸವ | Chariot festival

ಶಿವಕುಮಾರ ಎಸ್.ಪಿ.
ರಿಪ್ಪನ್‌ಪೇಟೆ: ಹೊಂಬುಜ ಜೈನ ಮಠದಲ್ಲಿ ಗುರುವಾರ ಶ್ರೀ ಪಾರ್ಶ್ವನಾಥ, ಶ್ರೀ ಪದ್ಮಾವತಿ ದೇವಿ ಮಹಾ ರಥೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.
ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದೊಂದಿಗೆ ವಿಧಿ ಸಹಿತ ಮಹಾನೈವೇದ್ಯ ಪೂಜೆ ನೆರವೇರಿತು. ಶೃಂಗಾರಗೊಂಡ ರಥದಲ್ಲಿ ಪದ್ಮಾವತಿ ದೇವಿಯ ಉತ್ಸವ ಮೂರ್ತಿಯ ರಥಾರೋಹಣಕ್ಕೆ ದೇವಿಯಲ್ಲಿ ಪ್ರಸಾದವನ್ನು ಬೇಡಲಾಯಿತು. ದೇವಿಯ ಅನುಮತಿ ನಂತರ  ರಥಾರೋಹಣ ನೆರವೇರಿತು. ಮಂಗಳ ವಾದ್ಯ ಸಹಿತ ಅಶ್ವ, ಆನೆಗಳ ಸ್ವಾಗತ, ಭಕ್ತರ ಜೈಕಾರದೊಂದಿಗೆ ತೇರನ್ನು ಎಳೆಯಲಾಯಿತು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ರಥೋತ್ಸವ ಸಾಗಿತು. ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ಪೂಜೆ ಸಲ್ಲಿಸಿದರು.
ಜಾತ್ರೆಯಲ್ಲಿ ಭಕ್ತರ ದಾಹ ತಣಿಸಲು ಸೇವಾಕರ್ತರು ಮಜ್ಜಿಗೆ, ಲಿಂಬು ಪಾನಕವನ್ನು ವಿತರಿಸುತ್ತಿದ್ದರೆ, ಇನ್ನೂ ಕೆಲವರು ಸಿಹಿ, ಹಣ್ಣುಗಳನ್ನು ಹಂಚಿದರು. ಮಠದ ನಿತ್ಯ ಅನ್ನಪ್ರಸಾದದ ಜತೆಗೆ, ಹಸಿದವರ ನೆರವಿಗೆ ಅಲ್ಲಲ್ಲಿ ದಾನಿಗಳಿಂದ ಅನ್ನ ಸಂತರ್ಪಣೆ ನೆರವೇರಿತು. 
ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಜಿನದತ್ತರಾಯನಿಂದ ದೇವಿಯ ಅಪೇಕ್ಷೆಯಂತೆ ಮೂಲ ನಕ್ಷತ್ರದಲ್ಲಿ ಪ್ರತಿಷ್ಠಾಪನೆಗೊಂಡ ಪದ್ಮಾವತಿ ದೇವಿ ಸರ್ವಶಕ್ತಳಾಗಿದ್ದು, ಭಕ್ತರ ಇಷ್ಟಾರ್ಥ ಕರುಣಿಸುವ ಮಾತೆಯಾಗಿದ್ದಾಳೆ. ಇವಳ ಪವಾಡ ಸದೃಶ ಘಟನೆಗಳಿಂದ ಈ ನೆಲವು ಅತಿಶಯ ಕ್ಷೇತ್ರವೆಂದು ಪ್ರಖ್ಯಾತಿ ಗಳಿಸಿದೆ. ದೇವಿಯ ಆಶೀರ್ವಾದದಿಂದ ದೇಶದಲ್ಲಿ ಶಾಂತಿ ನೆಲೆಸಿ, ಕಾಲಕಾಲಕ್ಕೆ ಮಳೆ, ಬೆಳೆಗಳು ಸಮೃದ್ಧವಾಗಿ ಆಗಲಿ ಎಂದು ಆಶಿಸಿದರು.