ಮಧು ಬಂಗಾರಪ್ಪ, ಸಚಿವ 
ಶಿವಮೊಗ್ಗ

ಡಿಕೆ ಸಂಪುಟದಲ್ಲೂ ಮಧುಗೆ ಸ್ಥಾನ I madhu in cabinet

ಪ್ರಮುಖ ಮುಖ್ಯಾಂಶಗಳು

  • 5 ವರ್ಷ ಸಚಿವನಾಗುವ ಅವಕಾಶ
  • ಶಿವಮೊಗ್ಗ ಜಿಲ್ಲೆ ಇತಿಹಾಸದಲ್ಲಿ ದಾಖಲೆ ಸೃಷ್ಟಿ
  • ತಂದೆಯ ನಾಮಬಲದೊಂದಿಗೆ ಹೈಕಮಾಂಡ್ ಶ್ರೀರಕ್ಷೆ

ಅರವಿಂದ ಅಕ್ಲಾಪುರ ಶಿವಮೊಗ್ಗ

ರಾಜ್ಯ ರಾಜಕೀಯದಲ್ಲಿ

90ರ ದಶಕದಿಂದೀಚೆಗೆ ಜಿಲ್ಲೆಯ ಯಾವುದೇ ಶಾಸಕರು ಒಂದು ಸರ್ಕಾರದಲ್ಲಿ ಸಂಪೂರ್ಣ ಐದು ವರ್ಷ ಪೂರೈಸಿದ ನಿದರ್ಶನಗಳೇ ಇಲ್ಲ. ಈಗ ಸೊರಬ ಶಾಸಕ ಮಧು

ಬಂಗಾರಪ್ಪ ಅವರಿಗೆ ಸತತ ಐದು ವರ್ಷ ಸಚಿವರಾಗಿ

ದಾಖಲೆ ನಿರ್ಮಿಸುವ ಅವಕಾಶ ಸಿಕ್ಕಿದೆ.


2013ರಲ್ಲಿ ಸಿದ್ದರಾಮಯ್ಯ ಸರ್ಕಾರವಿದ್ದಾಗ ಮೊದಲ ಅವಧಿಯಲ್ಲಿ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಬಳಿಕ ಕಾಗೋಡು ತಿಮ್ಮಪ್ಪ ಅವರಿಗೆ ಜಾಗ ಬಿಟ್ಟುಕೊಡಬೇಕಾಯಿತು. ಅದಕ್ಕೂ ಮುನ್ನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಿ ಪಕ್ಷ ಸಂಘಟನೆಗೆ ಧುಮುಕಿದ್ದರು. ಇದೀಗ ಮಧು ಬಂಗಾರಪ್ಪ 2028ರ ಚುನಾವಣೆವರೆಗೂ ಸಚಿವರಾಗಿ ಉಳಿದರೆ ಹೊಸ ದಾಖಲೆ ನಿರ್ಮಾಣವಾಗಲಿದೆ.


ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಜಿಲ್ಲೆಯಿಂದ ಸಚಿವರಾಗುವ ಅವಕಾಶ ಯಾರಿಗೆ ಎಂಬ ಪ್ರಶ್ನೆ ಕಳೆದು ಮೂರು ತಿಂಗಳಿನಿಂದ ಚರ್ಚೆಗೆ ಕಾರಣವಾಗಿತ್ತು. ಇರುವ ಮೂವರು ಹಿರಿಯ ಕಾಂಗ್ರೆಸ್ ಶಾಸಕರ ಪೈಕಿ ಮತ್ತೊಮ್ಮೆ ಮಧು ಸಚಿವ ಸ್ಥಾನ ಅಲಂಕರಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಈಡಿಗ ಸಮುದಾಯದವರೇ ಆಗಿರುವುದರಿಂದ ಅದೇ ಸಮುದಾಯಕ್ಕೆ ಸೇರಿದ ಮತ್ತೊಬ್ಬರಿಗೆ ಅವಕಾಶ ಕಷ್ಟ ಎಂಬ ಮಾತುಗಳು ಹರಿದಾಡಿದ್ದವು. ಆದರೆ ಎಲ್ಲ ಅಡೆತಡೆಗಳನ್ನೂ ಮೀರಿ ಮತ್ತೊಮ್ಮೆ ಮಂತ್ರಿ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ.


ಪಕ್ಷದೊಳಗಿನ ತೀವ್ರ ಸ್ಪರ್ಧೆಯನ್ನು ಎದುರಿಸಿ ಮಧು ಸಚಿವ ಸಂಪುಟ ಸೇರಿರುವುದು ಸಣ್ಣ ವಿಷಯವಲ್ಲ. ಅದರಲ್ಲೂ ಅವರದೇ ಸಮುದಾಯದ ಬೇಳೂರು ಗೋಪಾಲಕೃಷ್ಣ ಹಲವು ಬಾರಿ ದೆಹಲಿ ದಂಡಯಾತ್ರೆ ನಡೆಸಿದ್ದರು. ಕಾಂಗ್ರೆಸ್‌ನೊಳಗೆ ಹಾಗೂ ಶಾಸನಸಭೆಯಲ್ಲೂ ಅವರಿಗೆ ಹಿರಿತನವಿತ್ತು. ಅದೆಲ್ಲವನ್ನೂ ಹಿಂದಿಕ್ಕಿ ಸಚಿವರಾಗಿದ್ದಾರೆ.

ಸಾಗಿ ಬಂದ ರಾಜಕೀಯ ಹಾದಿ

2004-ಬಿಜೆಪಿಯಿಂದ ವಿಧಾನಸಭೆಗೆ ಸ್ಪರ್ಧೆ-ಸೋಲು
2008-ಸಮಾಜವಾದಿ ಪಕ್ಷ-ಸೋಲು
2013-ಜೆಡಿಎಸ್-ಗೆಲುವು
2018- ಜೆಡಿಎಸ್-ಸೋಲು
2018-ಲೋಕಸಭೆ ಉಪಚುನಾವಣೆ-ಜೆಡಿಎಸ್-ಸೋಲು
2019-ಲೋಕಸಭೆ ಚುನಾವಣೆ-ಜೆಡಿಎಸ್-ಸೋಲು
2023ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕೆ-ಗೆಲುವು

ಮಧು ಆಯ್ಕೆ ಹಿಂದೆ ಲೆಕ್ಕಾಚಾರ

ಮೂರು ವರ್ಷಗಳ ಹಿಂದೆ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ದಿನದಿಂದಲೂ ಬಿಜೆಪಿ ನಾಯಕರ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದ ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಉಗ್ರ ಪ್ರತಾಪ ತೋರುತ್ತಿದ್ದಾರೆ. ಸಚಿವರಾದಾಗಲೂ ಅವರ ವಾಗ್ದಾಳಿ ಮುಂದುವರಿದೇ ಇತ್ತು. ಮೊದಲ ಮೂರು ವರ್ಷದಲ್ಲಿ ಜಿಲ್ಲೆಗೆ ಹೇಳಿಕೊಳ್ಳುವಂತಹ ದೊಡ್ಡ ಯೋಜನೆಗಳನ್ನು ತರದಿದ್ದರೂ ಎದುರಾಳಿಗಳ ಮೇಲಿನ ಟೀಕೆಗಳು ಸದಾ ಚರ್ಚೆಯಲ್ಲಿ ಇರುತ್ತಿದ್ದವು. ಹಾಗೆ ಗಮನಿಸಿದರೆ ಬಿಜೆಪಿ ನಾಯಕರನ್ನು ಜಿಲ್ಲೆಯಲ್ಲಿ ಅಷ್ಟೊಂದು ಟೀಕಿಸಿದ ಮತ್ತೊಬ್ಬ ರಾಜಕಾರಣಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಕಾಣಲಿಲ್ಲ.


ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿರುವ ಬಿಲ್ಲವ ಸಮುದಾಯ ಸೇರಿ ಪ್ರಬಲ ಈಡಿಗ ಸಮುದಾಯವನ್ನು ತೃಪ್ತಿಪಡಿಸುವ ಸಲುವಾಗಿ ಮಧು ಬಂಗಾರಪ್ಪ ಆಯ್ಕೆ ಕಾಂಗ್ರೆಸ್‌ಗೆ ಅನಿವಾರ್ಯವಾಗಿತ್ತು. ಮಾಜಿ ಸಿಎಂ ಬಂಗಾರಪ್ಪ ಪುತ್ರ ಎಂಬ ವರ್ಚಸ್ಸು ಇರುವುದರಿಂದ ಕಾಂಗ್ರೆಸ್ ಅದನ್ನು ಮುಂದಿನ ಚುನಾವಣೆಯಲ್ಲಿ ಮತ ಬ್ಯಾಂಕ್ ಆಗಿ ಪರಿವರ್ತಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.


2023ರ ವಿಧಾನಸಭೆ ಚುನಾವಣೆಯಲ್ಲಿ ತನ್ನ ಹಿರಿಯ ಸಹೋದರಿಯ ಪತಿ, ನಟ ಶಿವರಾಜ್‌ಕುಮಾರ್ ಅವರನ್ನು ಕಾಂಗ್ರೆಸ್ ಪರವಾಗಿ ಚುನಾವಣಾ ಪ್ರಚಾರಕ್ಕೆ ಕರೆದುಕೊಂಡು ಬರುವಲ್ಲಿ ಮಧು ಯಶಸ್ವಿಯಾಗಿದ್ದರು. ಅದರಿಂದ ಕಾಂಗ್ರೆಸ್‌ಗೆ ಓರ್ವ ಸ್ಟಾರ್ ಪ್ರಚಾರಕ ಸಿಕ್ಕಂತಾಗಿತ್ತು. ಕೆಲವೆಡೆ ಶಿವರಾಜ್‌ಕುಮಾರ್ ಬರುತ್ತಾರೆ ಎಂಬ ಕಾರಣಕ್ಕೆ ಸಾವಿರಾರು ಜನ ಸೇರುತ್ತಿದ್ದರು. 2028ರ ಚುನಾವಣೆಯಲ್ಲೂ ಶಿವರಾಜ್‌ಕುಮಾರ್ ನೆರವು ಪಡೆಯಬಹುದು ಎಂಬುದು ಕಾಂಗ್ರೆಸ್

ಸಚಿವನಾಗಿ ಗಮನಸೆಳೆದಿದ್ದರು

ಶಿಕ್ಷಣ ಸಚಿವನಾಗಿ ಮಧು ಬಂಗಾರಪ್ಪ ಮಾಡಿದ ಅನೇಕ ಬದಲಾವಣೆಗಳು ಗಮನಸೆಳೆದವು. ಪಠ್ಯ ಪುಸ್ತಕದಲ್ಲಿ ಬಿಜೆಪಿ ಕಾಲದ ಹಲವು ಪಾಠಗಳನ್ನು ಕೈಬಿಟ್ಟಿದ್ದು ಅನೇಕರಿಗೆ ಖುಷಿ ಕೊಟ್ಟಿತ್ತು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಮೂರು ಪರೀಕ್ಷೆ ನಡೆಸುವ ಮೂಲಕ ಫಲಿತಾಂಶ ಹೆಚ್ಚಳಕ್ಕೆ ಕಾರಣರಾದರು. ಮರು ವರ್ಷ ಹಿಂದಿನಂತೆ ಎರಡೇ ಪರೀಕ್ಷೆ ನಡೆಸಿದರು. ಸಚಿವರಾದ ಆರಂಭದಲ್ಲಿ ಸ್ವಲ್ಪ ಗೊಂದಲದಲ್ಲಿದ್ದ ಅವರು ಕ್ರಮೇಣ ಇಲಾಖೆ ಮೇಲೆ ಹಿಡಿತ ಸಾಧಿಸಿದ್ದರು.

ಸಿಗದ ಮಂತ್ರಿ ಸ್ಥಾನ

ಭದ್ರಾವತಿಯ ಬಿ.ಕೆ.ಸಂಗಮೇಶ್ವರ್ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದವರು. ಈಗ ಜಿಲ್ಲೆಯಲ್ಲಿ ಅವರೇ ಕಾಂಗ್ರೆಸ್‌ನ ಹಿರಿಯ ಶಾಸಕ. ಒಮ್ಮೆಯಾದರೂ ಸಚಿವನಾಗಬೇಕೆಂಬ ಅವರ ಆಸೆ ಕೊನೆಗೂ ಈಡೇರಲಿಲ್ಲ. 2028ರ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ನನ್ನ ಮಗ ಗಣೇಶ್‌ಗೆ ನೀವೆಲ್ಲ ಆಶೀರ್ವದಿಸಿ ಎಂದು ಈಗಾಗಲೇ ಸಾರ್ವಜನಿಕವಾಗಿ ಹೇಳಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂಗಮೇಶ್ವರ್ ಸಚಿವರಾಗಲಿದ್ದಾರೆ ಎಂದು ನಾಲ್ಕು ವರ್ಷಗಳ ಹಿಂದೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಒಂದೇ ವೇದಿಕೆಯಲ್ಲಿ ನೀಡಿದ್ದ ವಾಗ್ದಾನ ಕೊನೆಗೂ ಹುಸಿಯಾಗಿದೆ. ರಾಜಕೀಯ ಸಂದ್ಯಾಕಾಲದಲ್ಲಿ ಸಚಿವ ಸ್ಥಾನದ ಜಪ ಮಾಡುತ್ತಿದ್ದ ಸಂಗಮೇಶ್ವರ್ ನಿರಾಸೆಯೊಂದಿಗೆ ರಾಜಕೀಯ ಜೀವನ ಮುಗಿಸುವಂತಾಗಿದೆ.

ಇಬ್ಬರು ಶಾಸಕರಿಂದಲೂ ಆಕ್ರೋಶ

ಸಚಿವ ಸ್ಥಾನ ಕೈತಪ್ಪಿರುವುದರಿಂದ ಶಾಸಕರಾದ ಬೇಳೂರು ಗೋಪಾಲಕೃಷ್ಣ ಹಾಗೂ ಬಿ.ಕೆ.ಸಂಗಮೇಶ್ವರ್ ಇಬ್ಬರೂ ತೀವ್ರ ಆಕ್ರೋಶಗೊಂಡಿದ್ದಾರೆ. ಈಗಾಗಲೇ ಇಬ್ಬರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮಾತನ್ನಾಡಿದ್ದಾರೆ. ಅವರು ರಾಜೀನಾಮೆ ನೀಡುತ್ತಾರೋ? ಇಲ್ಲವೋ? ಎಂಬುದು ಬೇರೆಯ ಮಾತು. ಆದರೆ ಉಳಿದ ಎರಡು ವರ್ಷ ಮಧು ಬಂಗಾರಪ್ಪ ಅವರಿಗೆ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸಂಪೂರ್ಣ ಸಹಕಾರ ನೀಡುತ್ತಾರೆ ಎಂದು ಹೇಳುವಂತಿಲ್ಲ. ಇವರಿಬ್ಬರ ಆಕ್ರೋಶವನ್ನು ಮಧು ಹೇಗೆ ತಣಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.