ಶಿವಮೊಗ್ಗದಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿದರು. ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಆದಿಜಾಂಬವ ನಿಗಮದ ಅಧ್ಯಕ್ಷ ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.
- ರಾಜ್ಯದಲ್ಲಿ 40 ಲಕ್ಷ ಜನಸಂಖ್ಯೆ ಇರುವ ಮಾದಾರ ಸಮಾಜ
- ಶಿವಮೊಗ್ಗದಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ
- ಮಹಾಸಭಾ ಅಧ್ಯಕ್ಷರನ್ನಾಗಿ ಸಚಿವ ಕೆ.ಎಚ್.ಮುನಿಯಪ್ಪ ನೇಮಕ
ಶಿವಮೊಗ್ಗ: ರಾಜ್ಯದಲ್ಲಿ ಅತ್ಯಂತ ಹಿಂದುಳಿದಿರುವ ಮಾದಾರ ಸಮುದಾಯದ ಸಬಲೀಕರಣಕ್ಕಾಗಿ ಕರ್ನಾಟಕ ಮಾದಾರ ಮಹಾಸಭಾ(Madara Mahasabha)ಸ್ಥಾಪನೆಗೊಂಡಿದೆ. ಮಹಾಸಭಾ ಅಧ್ಯಕ್ಷರನ್ನಾಗಿ ಸಚಿವ ಕೆ.ಎಚ್.ಮುನಿಯಪ್ಪ(K.H.Muniyappa)ಅವರನ್ನು ನೇಮಿಸಲಾಗಿದೆ ಎಂದು ಮಾಜಿ ಸಚಿವ, ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಚ್.ಆಂಜನೇಯ ಹೇಳಿದರು.
ಸಮಾಜದ ಸಂಘಟನೆಗಾಗಿ ಕಳೆದ ಮೂರು ತಿಂಗಳಿಂದ ಮಹಾಸಭಾ ತಂಡ ರಾಜ್ಯದಲ್ಲಿ ಪ್ರವಾಸ ನಡೆಸುತ್ತಿದೆ. ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಲ್ಲ ಸಮುದಾಯದವರಿಗೂ ಅವರದೇ ಆದ ಸಂಘಟನೆಗಳಿವೆ. ಆದರೆ ಮಾದಿಗ ಸಮಾಜಕ್ಕೆ ಸಂಘಟನೆ ಇರಲಿಲ್ಲ. ಅದಕ್ಕಾಗಿಯೇ ಮಹಾಸಭಾ ರಚಿಸಲಾಗಿದೆ. ದೊಡ್ಡಬಳ್ಳಾಪುರ(Doddaballapur) ಬಳಿ ಮಹಾಸಭಾಕ್ಕೆ 25 ಎಕರೆ ಜಾಗ ಗುರುತಿಸಲಾಗಿದೆ. ಜಾಗ ಮಂಜೂರಾದರೆ ನಮ್ಮ ಸಮಾಜದ ಬಹುಮುಖ ಪ್ರತಿಭೆಗಳು, ಪ್ರತಿಭಾವಂತರಿಗೆ ಕೆಎಎಸ್, ಐಎಎಸ್ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು. ಇದಕ್ಕಾಗಿ ವಿಶೇಷ ಅನುದಾನ ಮತ್ತು ನಿವೇಶನಕ್ಕೆ ಈಗಾಗಲೇ ಬೇಡಿಕೆ ಇಟ್ಟಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಆದಿಜಾಂಬವ ನಿಗಮದ ಅಧ್ಯಕ್ಷ ಮಂಜುನಾಥ್, ಪ್ರಮುಖರಾದ ಡಾ. ಶ್ರೀನಿವಾಸ್ ಕರಿಯಣ್ಣ, ಶಿವಪ್ಪ, ತಿಮ್ಲಾಪುರ ಲೋಕೇಶ್, ಶಿವಲಿಂಗಪ್ಪ, ಮಂಜುನಾಥ್, ದರ್ಶನ್ ಸುದ್ದಿಗೋಷ್ಠಿಯಲ್ಲಿದ್ದರು.