ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಜರುಗಿದ ಜಯತೀರ್ಥ ಮೇವುಂಡಿ ಹಾಗೂ ಪ್ರವೀಣ್ ಗೋಡ್ಖಿಂಡಿ ಅವರ ನಾದ-ನಿನಾದ ಜುಗಲ್‌ಬಂದಿ ಕಾರ್ಯಕ್ರಮ.
- ಹಿಂದೂಸ್ತಾನಿ-ಕೊಳಲು ವಾದನಕ್ಕೆ ಮೈಮರೆತ ಪ್ರೇಕ್ಷಕ
- ಶಿವಮೊಗ್ಗ ಸಾಂಸ್ಕೃತಿಕ ಚರಿತ್ರೆ ಪುಟ ಸೇರಿದ ನಾದ ನಿನಾದ
ಹೊರಗೆ ರಭಸವಾದ ಗಾಳಿ, ನಿರಂತರ ಸುರಿದ ಮಳೆ, ಕುವೆಂಪು (kuvempu) ರಂಗಮಂದಿರದೊಳಗೆ ಹಿಂದೂಸ್ತಾನಿ (hindustani) ಜುಗಲ್ ಬಂದಿಯ ಗಾಯನ-ವೇಣು ನಿನಾದ. ಶಿವಮೊಗ್ಗದ ಸಾಂಸ್ಕೃತಿಕ ಚರಿತ್ರೆ (history) ಯಲ್ಲಿ ದಾಖಲಾದ ಅಪರೂಪದ ಕಾರ್ಯಕ್ರಮಕ್ಕೆ ವಾರಾಂತ್ಯದ ಭಾನುವಾರ ಸಾಕ್ಷಿಯಾಯಿತು.
ಶಾಸ್ತ್ರೀಯ ಸಂಗೀತವನ್ನು ಲಯಬದ್ಧವಾಗಿ ಆಸ್ವಾದಿಸುವ, ವೇಣು ವಾದನದ ಝಲಕ್ ಮನತುಂಬಿಕೊಳ್ಳುವ ದೊಡ್ಡ ಶ್ರೋತೃಗಳ ಬಳಗ ಅಲ್ಲಿ ನೆರೆದಿತ್ತು. ಕಾರ್ಯಕ್ರಮ ಒಂದು ತಾಸು ತಡವಾಗಿ ಆರಂಭವಾದರೂ ಕೊನೆಯವರೆಗೂ ಕುಳಿತ ಕಲಾ ರಸಿಕರು ಸಂಗೀತ ರಸದೌತಣ ಸವಿದರು.
ಶ್ರೀಗಂಧ ಸಂಸ್ಥೆ ಸಹಯೋಗದಲ್ಲಿ ಸಪ್ತಸ್ವರ ಹಿಂದೂಸ್ತಾನಿ ಸಂಗೀತ ಸಭಾ ಆಶ್ರಯದಲ್ಲಿ ದಿ. ಅರುಣ್ ಹಂಪಿ ಹೊಳಿ ಅವರ ಜನ್ಮದಿನದ ನೆನಪಿಗಾಗಿ ಏರ್ಪಡಿಸಿದ್ದ ನಾದನಿನಾದ ಗಮನಸೆಳೆಯಿತು. ಏಕೆಂದರೆ ಕಾರ್ಯಕ್ರಮ ಪ್ರಸ್ತುತ ಪಡೆಸಿದವರು ಸಮಕಾಲೀನ ಸಂಗೀತ ಲೋಕದ ಇಬ್ಬರು ದಿಗ್ಗಜರು.
ಪಂಡಿತ್ ಜಯತೀರ್ಥ ಮೇವುಂಡಿ ಗಾಯನ ತಣ್ಣನೆ ಸುರಿಯುವ ಮಳೆಯಂತೆ ಭಾಸವಾದರೆ, ಪಂಡಿತ್ ಪ್ರವೀಣ್ ಗೋಡ್ಖಿಂಡಿ ಅವರ ಕೊಳಲು ವಾದನ ತಂಗಾಳಿಯ ಅನುಭವ ನೀಡಿತು. ಇಬ್ಬರು ಖ್ಯಾತನಾಮರಿಗೆ ತಕ್ಕಂತೆ ಪಕ್ಕಾವಾದ್ಯ ಸಹಕಾರ ನೀಡಿದವರ ಪ್ರತಿಭೆಯೂ ಪ್ರಶ್ನಾತೀತ. ಭಕ್ತಿಭಾವದ ಗಾಯನ ಹಾಗೂ ಕೊಳಲಿನ ನಾದ ಆಧ್ಯಾತ್ಮಿಕ ಅನುಭೂತಿ ನೀಡಿತು.
ಜಯತೀರ್ಥ ಅವರ ದಾಸವಾಣಿ, ಅಕ್ಕ ಹಾಗೂ ಬಸವಣ್ಣನ ವಚನಕ್ಕೆ ನೆರೆದಿದ್ದವರಿಂದ ಸಿಕ್ಕ ಪ್ರತಿಕ್ರಿಯೆ ವರ್ಣಾನಾತೀತ.
ಮೇವುಂಡಿ ಹಾಗೂ ಗೋಡ್ಖಿಂಡಿ ಒಂದೇ ರಾಗವನ್ನು ಬೇರೆ ಬೇರೆ ಆಯಾಮದಲ್ಲಿ ತೋರಿಸಿ ಕೊನೆಗೆ ಇಬ್ಬರೂ ಸೇರಿ ಒಂದೇ ಭಾವಕ್ಕೆ ಶ್ರೋತೃಗಳನ್ನು ಕರೆದೊಯ್ದರು. ಸಿತಾರ್-ಸರೋದ್, ಘಟಂ-ತಬಲಾ, ಗಾಯನ-ಗಾಯನ, ಕೊಳಲು-ತಬಲಾ ಜುಗಲ್‌ಬಂದಿ ಆಯೋಜನೆ ಹೆಚ್ಚು. ಆದರೆ ಹಿಂದೂಸ್ತಾನಿ ಗಾಯನದೊಂದಿಗೆ ಕೊಳಲಿನ ಜುಗಲ್‌ಬಂದಿ ಕಷ್ಟಕರ. ಆದರೆ ಅದನ್ನು ಶ್ರೋತೃಗಳ ಮನಸ್ಸಿನಲ್ಲಿ ಅಚ್ಚಳಿಯದಂತೆ ಮಾಡಿದ್ದು ಮೇವುಂಡಿ-ಗೋಡ್ಖಿಂಡಿ ಹೆಚ್ಚುಗಾರಿಕೆಯೇ ಸರಿ.
ಸವಾಲ್-ಜವಾಬ್
ಕಿರಾನಾ ಘರಾನಾ ಶೈಲಿಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಪ್ರವೀಣ್ ಗೋಡ್ಖಿಂಡಿ ಹಾಗೂ ಜಯತೀರ್ಥ ಮೇವುಂಡಿ ಅವರ ಜುಗಲ್‌ಬಂದಿ ಒಂದರ್ಥದಲ್ಲಿ ಸವಾಲ್ ಜವಾಬ್‌ನಂತಿತ್ತು. ಒಬ್ಬರ ಪ್ರತಿಭೆಗೆ ಮತ್ತೊಬ್ಬರು ಮೆಚ್ಚುಗೆ ಸೂಚಿಸುತ್ತಲೇ ಭರ್ತಿ ಎರಡು ತಾಸು ಇಡೀ ಸಂಗೀತ ಕಚೇರಿಯನ್ನು ಆವರಿಸಿಕೊಂಡರು. ಆಗಾಗ ಗೋಡ್ಖಿಂಡಿ ಕೊಳಲಿಗೆ ಪಂಡಿತ್ ಕೇಶವ ಜೋಷಿ ತಬಲಾದಲ್ಲಿ ಪೈಪೋಟಿ ನೀಡಿದರು. ಅತ್ತ ಮೇವುಂಡಿ ಅವರ ಆಲಾಪಕ್ಕೆ ಪಂಡಿತ್ ನರೇಂದ್ರ ನಾಯಕ್ ಹಾರ‌್ಮೋನಿಯಂನಲ್ಲಿ ಅತ್ಯುತ್ತಮ ಸಹಕಾರ ನೀಡಿದರು. ಯುವ ಕಲಾವಿದ ಶ್ರೀನಿವಾಸ ಹಂಪಿಹೊಳಿ, ಮೇವುಂಡಿ ಪುತ್ರ ಗಮನಸೆಳೆದರು. ದಿಗ್ಗಜರಿಬ್ಬರ ಸಂಗೀತ ಸುಧೆಯ ನಡುವೆ ಕೇಶವ ಜೋಷಿ ಹಾಗೂ ನರೇಂದ್ರ ನಾಯಕ್ ಅವರಿಗೂ ಶ್ರೋತೃಗಳು ಚಪ್ಪಾಳೆಯ ಸುರಿಮಳೆಗೈದರು.
ರಾಗ್ ರಂಗ್‌ಗೆ ಸಿಗದ ಪ್ರತಿಕ್ರಿಯೆ
ಸಂಗೀತ ಲೋಕದಲ್ಲಿ 1990ರ ದಶಕದ ಕೊನೆಯ ಭಾಗದಲ್ಲಿ ರಾಗ್ ರಂಗ್ ಎಂಬ ಆಲ್ಬಂ ಒಂದು ಬಹಳಷ್ಟು ಸದ್ದು ಮಾಡಿತ್ತು. ಅದು ಇಂದಿಗೂ ಅಷ್ಟೇ ಜೀವಂತಿಕೆ ಉಳಿಸಿಕೊಂಡಿದೆ. ಅದು ಪ್ರವೀಣ್ ಗೋಡ್ಖಿಂಡಿ ಅವರ ಕೊಳಲು ವಾದನ ಹಾಗೂ ಕದ್ರಿ ಗೋಪಾಲನಾಥ್ ಅವರ ಸ್ಯಾಕ್ಸೋಫೋನ್ ವಾದನದ ಜುಗಲ್ ಬಂದಿಯ ಆಲ್ಬಂ. ಆ ಕಾಲಘಟದಲ್ಲಿ ಅದು ಜನರನ್ನು ಹುಚ್ಚೆಬ್ಬಿಸಿತ್ತು. ಭಾನುವಾರ ಕಾರ್ಯಕ್ರಮದಲ್ಲೂ ಗಾಯನದ ನಡುವೆ ಗೋಡ್ಖಿಂಡಿ ರಾಗ್ ರಂಗನ್ ಒಂದು ಝಲಕ್ ನುಡಿಸಿದರು. ಆದರೆ ಪ್ರೇಕ್ಷಕರಿಂದ ತಕ್ಕ ಪ್ರತಿಕ್ರಿಯೆ ಬಾರಲಿಲ್ಲ.