ಸಾಗರದ ಬಚ್ಚೋಡಿಯಲ್ಲಿ ಲಯನ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸೋಲಾರ್ ವಿದ್ಯುದ್ದೀಪ, ಗ್ರೀನ್ ಡೆಸ್ಕ್ ವಿತರಿಸಲಾಯಿತು. ಸುಧೀರ್‌ಕುಮಾರ್ ಶೆಟ್ಟಿ ಹಕ್ಲಾಡಿ, ಡಾ. ಟಿ.ಪ್ರಸನ್ನ, ಇ.ನಾಗರಾಜ್, ಪಾಂಡುರಂಗ ಇತರರಿದ್ದರು.
ಸಾಗರ: ಸಮುದಾಯದ ಸೇವೆ ಲಯನ್ಸ್ ಪ್ರಮುಖ ಉದ್ದೇಶ. ಲಯನ್ಸ್ ನಡೆ ಕುಗ್ರಾಮದ ಕಡೆ ಕಾರ್ಯಕ್ರಮ ಯೋಜಿಸಿ ಅನುಷ್ಠಾನಕ್ಕೆ ತರಲಾಗಿದೆ ಎಂದು ಲಯನ್ಸ್ ಸಾಗರ ಸಂಸ್ಥೆಯ ಸುಧೀರ್‌ಕುಮಾರ್ ಶೆಟ್ಟಿ ಹಕ್ಲಾಡಿ ಹೇಳಿದರು.
ಸಾಗರ ತಾಲೂಕಿನ ಬಚ್ಚೋಡಿಯಲ್ಲಿ ಲಯನ್ಸ್ ಸಂಸ್ಥೆಯಿಂದ ಲಯನ್ಸ್ ನಡೆ ಕುಗ್ರಾಮದ ಕಡೆ ಕಾರ್ಯಕ್ರಮದಡಿ ಮಕ್ಕಳಿಗೆ ಸೋಲಾರ್ ವಿದ್ಯುದ್ದೀಪ, ಗ್ರೀನ್ ಡೆಸ್ಕ್ ವಿತರಣೆ, ವಾಕರ್ ಆನ್ ವ್ಹೀಲ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯುತ್ ಸಮಸ್ಯೆಯಿಂದ ಓದಲು ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಸೋಲಾರ್ ವಿದ್ಯುದ್ದೀಪ, ಮಕ್ಕಳಿಗೆ ಗ್ರೀನ್‌ಡೆಸ್ಕ್ ವಿತರಿಸಲಾಗುತ್ತಿದೆ. ವೃದ್ಧರಿಗೆ ವಾಕರ್ ಆನ್ ವ್ಹೀಲ್ ನೀಡಲಾಗಿದೆ. ದಾನಿಗಳನ್ನು ಹುಡುಕಿ ಅರ್ಹರಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಲಯನ್ಸ್ ಸಾಗರ ಸಂಸ್ಥೆ ಅಧ್ಯಕ್ಷ ಡಾ. ಟಿ.ಪ್ರಸನ್ನ ಮಾತನಾಡಿ, ಏಳೆಂಟು ತಿಂಗಳಿಂದ ಲಯನ್ಸ್ ಸಂಸ್ಥೆ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದೆ. ಅನೇಕ ದಾನಿಗಳು ಲಯನ್ಸ್ ಮೂಲಕ ಸಮಾಜಕ್ಕೆ ಬೇಕಾದ ಸೌಲಭ್ಯ ನೀಡುತ್ತಿದ್ದಾರೆ ಎಂದರು. ಲಯನ್ಸ್ ಸಂಸ್ಥೆಯ ಇ.ನಾಗರಾಜ್, ಟಿ.ವಿ.ಪಾಂಡುರಂಗ, ಶ್ರೀಧರ್, ಮಾನಸಾ, ಲಾರೆನ್ಸ್, ಸಂತೋಷ್ ಲಿಂಗನಮಕ್ಕಿ ಇತರರಿದ್ದರು.