ಆನವಟ್ಟಿ ಸಮೀಪದ ನೇರಲಿಗಿ ಗ್ರಾಮದ ಕೆರೆಗೆ ಮೂಗೂರು ಏತ ನೀರಾವರಿ ಯೋಜನೆಯಿಂದ ಹರಿಸಿರುವ ನೀರಿಗೆ ಬಿಜೆಪಿ ಟಕದಿಂದ ಪೂಜೆ ಸಲ್ಲಿಸಲಾಯಿತು. ಪ್ರಕಾಶ್ ಅಗಸನಹಳ್ಳಿ, ಡಾ. ಜ್ಞಾನೇಶ್, ಗೀತಾ ಮಲ್ಲಿಕಾರ್ಜುನ, ಸುಧಾ ಶಿವಪ್ರಸಾದ್ ಇತರರಿದ್ದರು.
- ಮೂಗೂರು ಯೋಜನೆಗೆ ಗಂಗಾಪೂಜೆ
- ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ ಹೇಳಿಕೆ
- ಏತ ನೀರಾವರಿಯಿಂದ ಬೋರ್ವೆಲ್ಗಳಿಗೆ ಅನುಕೂಲ
ಆನವಟ್ಟಿ: ರಾಜ್ಯದಲ್ಲಿ ಮುಂಗಾರು ಮಳೆ ದುರ್ಬಲವಾಗಿ ರೈತರು ಕೃಷಿ ಚಟುವಟಿಕೆಗಳನ್ನು ನಡೆಸಲು ಆಗದೆ ಕಂಗೆಟ್ಟಿರುವ ಸಂದರ್ಭದಲ್ಲಿ ಏತ ನೀರಾವರಿಯಂತಹ ಯೋಜನೆಗಳು ಕೆರೆಕಟ್ಟೆಗಳನ್ನು ತುಂಬಿಸಿ, ಬೋರ್ವೆಲ್ಗಳಲ್ಲಿ ಅಂತರ್ಜಲ ಮಟ್ಟ ಉಳಿಸುವಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತಿವೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ ತಿಳಿಸಿದರು.
ಆನವಟ್ಟಿ ಸಮೀಪದ ನೇರಲಿಗಿ ಗ್ರಾಮದ ಕೆರೆಗೆ ಮೂಗೂರು ಏತ ನೀರಾವರಿ ಯೋಜನೆಯಿಂದ ಹರಿಸುತ್ತಿರುವ ನೀರಿಗೆ ಪೂಜೆ ಸಲ್ಲಿಸಿ ಮಾತನಾಡಿದರು.
ಏಷ್ಯಾ ಖಂಡದಲ್ಲೇ ಸೊರಬ ತಾಲೂಕು ಅತೀ ಹೆಚ್ಚು ಕೆರೆಗಳನ್ನು ಹೊಂದಿರುವ ಪ್ರದೇಶವಾಗಿದೆ. ಇಲ್ಲಿನ ಕೆರೆಗಳು ಅಂತರ್ಜಲ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಾಲೂಕಿನ ಅಭಿವೃದ್ಧಿಗಾಗಿ ನೀರಾವರಿ ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ಆದ್ದರಿಂದ ಇಂದು ತಾಲೂಕಿನ ರೈತರು ಬರದ ಛಾಯೆಯಿಂದ ಪಾರಾಗಿದ್ದಾರೆ ಎಂದರು.
ತಾಲೂಕಿನ ಏತ ನೀರಾವರಿ ಯೋಜನೆಯ ವಿದ್ಯುತ್ ಬಿಲ್ ಬಾಕಿ ಇರುವುದರಿಂದ ಕೆರೆಗಳಿಗೆ ನೀರು ತುಂಬಿಸುವಲ್ಲಿ ತಡವಾಗಿದೆ. ಈ ವಿಷಯ ತಿಳಿದ ಬಿ.ವೈ.ರಾವೇಂದ್ರ ಅವರು ಬಾಕಿ ಇರುವ ಸುಮಾರು 30 ಕೋಟಿ ರೂ.ಗಳನ್ನು ಪಾವತಿ ಮಾಡುವ ಮೂಲಕ ತಾಲೂಕಿನ ರೈತರ ಹಿತಕ್ಕಾಗಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ತಾಲೂಕು ಮಂಡಲ ಉಪಾಧ್ಯಕ್ಷ ಡಾ. ಜ್ಞಾನೇಶ್, ಜಿಪಂ ಮಾಜಿ ಅಧ್ಯೆ ಗೀತಾ ಮಲ್ಲಿಕಾರ್ಜುನ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರಾದ ಸುಧಾ ಶಿವಪ್ರಸಾದ್, ಮಲ್ಲಿಕಾರ್ಜುನ ಗುತ್ತೇರ, ನಿರಂಜನ್ ಕುಪ್ಪಗಡ್ಡೆ, ಮಂಡಲ ಅಧ್ಯಕ್ಷ ಎ.ಎಲ್.ಅರವಿಂದ್, ಉಪಾಧ್ಯಕ್ಷ ಮಧುರಾ ಶೇಟ್, ಆನವಟ್ಟಿ ಶಕ್ತಿ ಕೇಂದ್ರದ ಅಧ್ಯಕ್ಷ ಕೊಟ್ರೇಶ್ ಸ್ವಾಮಿ, ಸದಸ್ಯರಾದ ಸುರೇಶ್ ಇತರರಿದ್ದರು.