ಶಿಕಾರಿಪುರದಲ್ಲಿ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆಯಲ್ಲಿ ಕೆ.ಯುವರಾಜ್, ಡಿ.ಮಂಜುನಾಥ್, ಶ್ರೀಪಾಲ್, ಬಿ.ಪಾಪಯ್ಯ ಇತರರಿದ್ದರು.
ಶಿಕಾರಿಪುರ: ಜಾನಪದ ಕೇವಲ ಕಲೆಯಲ್ಲ, ಅದು ನಮ್ಮ ನೆಲದ ಸಂಸ್ಕೃತಿ ಮತ್ತು ಇತಿಹಾಸ. ಹಿರಿಯರು ನೀಡಿರುವ ಅಮೂಲ್ಯ ಆಸ್ತಿ ಎಂದು ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆ.ಯುವರಾಜ್ ಹೇಳಿದರು.
ಜಾನಪದ ಪರಿಷತ್ ತಾಲೂಕು ಘಟಕ, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಬಾಪೂಜಿ ಎಜುಕೇಷನ್ ಸೊಸೈಟಿ, ಆದರ್ಶ ಎಜುಕೇಷನ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾನಪದದಲ್ಲಿ ಕೃತಕತೆ, ಉತ್ಪ್ರೇಕ್ಷೆ ಇರುವುದಿಲ್ಲ. ಜನರ ಬದುಕು, ನೋವು, ಸಂತಸ, ಆಚರಣೆ, ನಂಬಿಕೆ, ಸಂಪ್ರದಾಯ ಹಾಗೂ ಜೀವನ ಅನುಭವಗಳು ಇರುತ್ತವೆ. ಹಾಡು, ಹಸೆ, ನಾಟಕ, ನೃತ್ಯ ಸೇರಿ ವಿವಿಧ ಕಲಾ ಪ್ರಕಾರಗಳ ಮೂಲಕ ಜಾನಪದ ತಲೆಮಾರುಗಳಿಂದ ತಲೆಮಾರುಗಳಿಗೆ ಸಾಗುತ್ತಿದೆ. ಗ್ರಾಮೀಣ ಮಹಿಳೆಯರು ಜಾನಪದವನ್ನು ಉಳಿಸಿಕೊಂಡು ಬಂದಿದ್ದಾರೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ಜಾನಪದ ಎಂದರೆ ನಮ್ಮ ಆಚರಣೆಗಳು, ಆಚಾರ-ವಿಚಾರಗಳು. ಅದೊಂದು ಬೆಲೆ ಕಟ್ಟಗದಂತಹ ಅತ್ಯಮೂಲ್ಯ ಸಂಪತ್ತು. ಈ ಬಗ್ಗೆ ಮಕ್ಕಳಿಗೆ ಹಾಗೂ ಯುವಜನರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಬಿ.ಪಾಪಯ್ಯ, ಕಾರ್ಯದರ್ಶಿ ಸತ್ಯನಾರಾಯಣ, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಕೆ.ಪಿ.ಶ್ರೀಪಾಲ್, ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ತಾಲೂಕು ಅಧ್ಯಕ್ಷ ಎಂ.ನವೀನ್‌ಕುಮಾರ್, ಕಸಾಪ ತಾಲೂಕು ಅಧ್ಯಕ್ಷ ಎಚ್.ಎಸ್.ರಘು, ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಎಸ್.ಎನ್.ನರಸಿಂಹಸ್ವಾಮಿ, ನಿವೃತ್ತ ಬಿಇಒ ನಾಗೇಂದ್ರಪ್ಪ ಇತರರಿದ್ದರು.