ಸೊರಬದ ಚಿಕ್ಕಪೇಟೆಯ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ಅವರಣದಲ್ಲಿ ಮನೆಗೊಂದು ಗ್ರಂಥಾಲಯ ಮತ್ತು ಮುಂಗಾರು ಕಾವ್ಯ ಸಂಭ್ರಮ ಕಾರ್ಯಕ್ರಮವನ್ನು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜಯಶೀಲಗೌಡ ಉದ್ಘಾಟಿಸಿದರು. ಕೆಂಪಿನ ಸಿದ್ದವೃಷಬೇಂದ್ರ ಸ್ವಾಮೀಜಿ, ಜಯಶೀಲ ಗೌಡ ಅಂಕರವಳ್ಳಿ, ಶಂಕರ ಶೇಟ್ ಮತ್ತಿತರರಿದ್ದರು.
- ಮನೆಗೊಂದು ಗ್ರಂಥಾಲಯ, ಮುಂಗಾರು ಕಾವ್ಯ ಸಂಭ್ರಮ
- ಕೆಂಪಿನ ಸಿದ್ದವೃಷಬೇಂದ್ರ ಸ್ವಾಮೀಜಿ ಅಭಿಮತ
- ಜ್ಞಾನ ಸಂಪಾದನೆಯಿಂದ ಬದುಕು ಸಾರ್ಥಕ
ಸೊರಬ: ಮನೆ, ಮನಸ್ಸು ಸುಂದರವಾಗಿರಲು ಮನೆಯಲ್ಲಿ ಗ್ರಂಥಾಲಯ, ಪುಸ್ತಕಗಳು ಇರಬೇಕು. ಜ್ಞಾನ ಸಂಪಾದನೆಯಿಂದ ಬದುಕು ಸಾರ್ಥಕ ಎಂದು ಜಡೆ ಸಂಸ್ಥಾನ ಮಠದ ಕುಮಾರ ಕೆಂಪಿನ ಸಿದ್ದವೃಷಬೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಚಿಕ್ಕಪೇಟೆಯ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಆವರಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಜಿಲ್ಲಾ ಜಾಗೃತಿ ಸಮಿತಿ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸತಿಕ ವೇದಿಕೆಯಿಂದ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಮತ್ತು ಮುಂಗಾರು ಕಾವ್ಯ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಮ್ಮ ಬದುಕನ್ನು ಕನ್ನಡ ನಾಡಿಗಾಗಿ ಮೀಸಲಿಡಬೇಕು. ಈ ನಾಡಿನ ಕವಿಗಳ ಕವಿತೆಗಳನ್ನು ಆಸ್ವಾದಿಸುವ ಮೂಲಕ ಕವನದ ಅರ್ಥಗಳನ್ನು ಬದುಕಿಗೆ ಅನ್ವಯಿಸಿಕೊಂಡಾಗ ಸಮಾಜದಲ್ಲಿ ಸುಂದರ ಬದುಕು ನಡೆಸಲು ಸಾಧ್ಯ. ಬದುಕನ್ನು ಜ್ಞಾನ ಸಂಪಾದನೆಗಾಗಿ ತೆರೆದಿಡಬೇಕು. ಕವಿಗಳ, ಶರಣರ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಯಶೀಲ ಗೌಡ ಅಂಕರವಳ್ಳಿ ಮಾತನಾಡಿ, ದೇಶ ಸುತ್ತಿ ಕೋಶ ಓದಿ ಎಂಬ ಮಾತು ಸತ್ಯವಾದುದು. ಪುಸ್ತಕ ಓದುವುದರಿಂದ ಜ್ಞಾನದ ಭಂಡಾರ ತೆರೆದಂತೆ. ಯುವ ಪೀಳಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸಮಾಜ ಸುಸ್ಥಿತಿಯಲ್ಲಿ ಇರಲು ಸಾಧ್ಯ ಎಂದರು.
ಕನ್ನಡ ಸಾಹಿತ್ಯ ಮತ್ತು ಸಾಂಸತಿಕ ವೇದಿಕೆ ತಾಲೂಕು ಅಧ್ಯಕ್ಷ ಶಂಕರ ಶೇಟ್, ಪದವಿ ಕಾಲೇಜಿನ ಉಪನ್ಯಾಸಕಿ ಎ.ವಿ.ಪವಿತ್ರಾ ಮುಂಗಾರು ಕಾವ್ಯ ಸಂಭ್ರಮದ ಕಾವ್ಯಗಳನ್ನು ವಿಶ್ಲೇಷಿಸಿದರು. ವಿದ್ಯಾಲಯದ ಸಂಚಾಲಕಿ ವೀಣಾಅಕ್ಕ ಅಧ್ಯತೆ ವಹಿಸಿದ್ದರು. ಜಿಪಂ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ಉಪನ್ಯಾಸಕ ಡಾ.ಉಮೇಶ್ ಭದ್ರಾಪುರ, ಗ್ರಂಥಾಲಯ ಅಧಿಕಾರಿ ಕೃಷ್ಣಮೂರ್ತಿ, ರೇಣುಕಮ್ಮ ಗೌಳಿ, ಕಾರ್ಯದರ್ಶಿ ಮಹೇಶ್ ಖಾರ್ವಿ, ಭಾರತಿ ಹನುಮಂತಪ್ಪ, ರೇಖಾ ಜಗದೀಶ್, ಶಿಕ್ಷಕ ರಾವೇಂದ್ರ, ನಿವೃತ್ತ ಶಿಕ್ಷಕ ಸದಾನಂದ ಇತರರಿದ್ದರು.