ಕಸಾಪ ಸಂಸ್ಥಾಪನಾ ದಿನದ ಕಾರ್ಯಕ್ರಮವನ್ನು ಶಿಕಾರಿಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್‌ಕುಮಾರ್ ಉದ್ಘಾಟಿಸಿದರು. ಪ್ರಕಾಶ್, ವಸಂತಮಾಧವ, ಎಚ್.ಎಸ್.ರಘು, ಸುಭಾಸ್‌ಚಂದ್ರ ಸ್ಥಾನಿಕ್ ಇತರರಿದ್ದರು.
ಶಿಕಾರಿಪುರ: ಕನ್ನಡ ಸಾಹಿತ್ಯ ಪರಿಷತ್ ಕೇವಲ ಕಟ್ಟಡವಲ್ಲ. ಅದು ಕನ್ನಡಿಗರ ಅಸ್ಮಿತೆ. ಕಳೆದುಹೋದ ವೈಭವವನ್ನು ನೆನಪಿಸಿಕೊಳ್ಳುತ್ತಲೇ ಕನ್ನಡದ ಉಜ್ವಲ ಭವಿಷ್ಯಕ್ಕೆ ಅಡಿಪಾಯ ಹಾಕುವ ಜವಾಬ್ದಾರಿ ನಮ್ಮ ಮೇಲಿದೆ. ಎಂದು ಸಾಲೂರಿನ ಉಪನ್ಯಾಸಕ ಡಾ. ಪ್ರಕಾಶ್ ಹೇಳಿದರು.
ಕಸಾಪದಿಂದ ಚನ್ನಕೇಶವ ನಗರದ ಡಿ. ದೇವರಾಜ ಅರಸು ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ಕಸಾಪ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕನ್ನಡ ನಾಡು, ನುಡಿ, ಸಂಸ್ಕೃತಿಯ ಉಸಿರಾಗಿರುವ ಕನ್ನಡ ಸಾಹಿತ್ಯ ಪರಿಷತ್ ತನ್ನ 112ನೇ ಸಂಸ್ಥಾಪನಾ ದಿನದ ಸಂಭ್ರಮದಲ್ಲಿದೆ. ಚರಿತ್ರೆಯ ಪುಟಗಳನ್ನು ತಿರುವಿ ನೋಡಿದಾಗ, ಈ ಸಂಸ್ಥೆ ಕೇವಲ ಸಾಹಿತ್ಯಕ್ಕೆ ಸೀಮಿತವಾಗದೆ, ಕನ್ನಡಿಗರ ಒಗ್ಗಟ್ಟಿನ ಮಂತ್ರವಾಗಿ ರೂಪುಗೊಂಡಿದೆ ಎಂದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್‌ಕುಮಾರ್ ಮಾತನಾಡಿ, 20ನೇ ಶತಮಾನದ ಆರಂಭದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಪರಕೀಯ ಭಾಷೆಗಳ ಪ್ರಭಾವದಿಂದ ಸೊರಗುತ್ತಿದ್ದ ಕಾಲವದು. ಈ ಸಂದರ್ಭದಲ್ಲಿ ಕನ್ನಡವನ್ನು ಸಂಘಟಿಸುವ ಅಗತ್ಯವನ್ನು ಮನಗಂಡ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಫಲವಾಗಿ 1915ರ ಮೇ 5ರಂದು ಬೆಂಗಳೂರಿನಲ್ಲಿ ಪರಿಷತ್ ಅಸ್ತಿತ್ವಕ್ಕೆ ಬಂದಿತು ಎಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ರಘು ಮಾತನಾಡಿದರು. ಕಸಾಪ ಹಿರಿಯ ಸದಸ್ಯ, ವಕೀಲ ವಸಂತಮಾಧವ, ಶರಣಸಾಹಿತ್ಯ ಪರಿಷತ್ ತಾಲೂಕು ಮಾಜಿ ಅಧ್ಯಕ್ಷ ಸುಭಾಸ್‌ಚಂದ್ರ ಸ್ಥಾನಿಕ್, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ನರಸಿಂಹಸ್ವಾಮಿ ಇತರರಿದ್ದರು.