ಸಾಗರದಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಅಳವಡಿಸಿದ್ದ 8 ಲಕ್ಷ ರೂ. ವೆಚ್ಚದ ವಿದ್ಯುದ್ದೀಪವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಸುರೇಶಬಾಬು, ಮಹಾಬಲ ಕೌತಿ, ಕಿರಣ್ ದೊಡ್ಮನೆ, ಅನ್ವರ್ ಭಾಷಾ ಇತರರಿದ್ದರು.
- ಶಾಸಕ ಗೋಪಾಲಕೃಷ್ಣ ಬೇಳೂರು ಸಲಹೆ
- ಸಾಗರದಲ್ಲಿ ಕ್ರೀಡಾಂಗಣ ವಿದ್ಯುದ್ದೀಪ ಉದ್ಘಾಟನೆ
- ದುಶ್ಚಟಗಳಿಂದ ಯುವಜನತೆ ದೂರವಿರಿ
ಸಾಗರ: ಯುವಜನರು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಆಸಕ್ತಿ ವಹಿಸಬೇಕು. ದುಶ್ಚಟಗಳಿಂದ ದೂರವಿದ್ದು, ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಶಾಂತವೇರಿ ಗೋಪಾಲಗೌಡ ಒಳಾಂಗಣ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಒಳಾಂಗಣ ಕ್ರೀಡಾಂಗಣಕ್ಕೆ ಅಳವಡಿಸಿದ್ದ 8 ಲಕ್ಷ ರೂ. ವೆಚ್ಚದ ವಿದ್ಯುದ್ದೀಪವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಬದಲಾದ ದಿನಗಳಲ್ಲಿ ಹವಮಾನ, ಸೇವಿಸುವ ಆಹಾರ, ದಿನಚರಿ ಬದಲಾವಣೆ ಇನ್ನಿತರ ಕಾರಣಗಳಿಂದ 18-30 ವರ್ಷದ ಯುವ ಜನರು ಹೃದಯಾಘಾತದಿಂದ ಮರಣ ಹೊಂದುತ್ತಿದ್ದಾರೆ. ಯುವಸಮೂಹ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚಿನ ಮಹತ್ವ ನೀಡಬೇಕು. ಮೊದಲು ಆರೋಗ್ಯದ ಕಡೆ ಗಮನ ಹರಿಸಿ, ಆರೋಗ್ಯ ಚೆನ್ನಾಗಿದ್ದರೆ ಉನ್ನತ ಸಾಧನೆ ಮಾಡಲು ಸಾಧ್ಯ ಎಂದರು.
"
ಸಾಗರ ಕ್ಷೇತ್ರವು ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಲೋಕಕ್ಕೆ ತನ್ನದೆ ಕೊಡುಗೆ ನೀಡಿದೆ. ಸಾಕಷ್ಟು ಕ್ರೀಡಾಪಟುಗಳು ಇದ್ದು, ಟೆನ್ನಿಸ್ ಕ್ಲಬ್ ಮಾಡುವ ಜತೆ ರಾಜ್ಯ ಯೂನಿಟ್‌ಗೆ ಸೇರಿಸಿದರೆ ಕ್ರೀಡೆಗೆ ಹೆಚ್ಚಿನ ಅನುದಾನ ತರಲು ಸಾಧ್ಯವಿದೆ. ಇದರಿಂದ ಹೊಸ ಕ್ರೀಡಾಪಟುಗಳಿಗೆ ಅವಕಾಶ ಸಿಗುತ್ತದೆ. ಗೋಪಾಲಕೃಷ್ಣ ಬೇಳೂರುಶಾಸಕ
ಸಾಗರದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, 2008ರಲ್ಲಿ ಶಾಸಕನಾಗಿದ್ದಾಗ ಒಳಾಂಗಣ ಈಜುಕೊಳ ನಿರ್ಮಿಸಲು 2 ಕೋಟಿ ರೂ. ಮಂಜೂರು ಮಾಡಿಸಲಾಗಿತ್ತು. ಕಾಗೋಡು ತಿಮ್ಮಪ್ಪ ಅವರ ಅವಧಿಯಲ್ಲಿ ಬೇರೆ ಬೇರೆ ಕಾರಣದಿಂದ ಈಜುಕೊಳ ಕಾಮಗಾರಿ ಮುಗಿದಿರಲಿಲ್ಲ. ಹಿಂದಿನ ಶಾಸಕರ ಅವಧಿಯಲ್ಲಿ ತರಾತುರಿಯಲ್ಲಿ ಈಜುಕೊಳ ಉದ್ಘಾಟನೆಯಾಗಿತ್ತು. ನಾನು ಶಾಸಕನಾದ ನಂತರ ಸಾರ್ವಜನಿಕರು ಈಜುಕೊಳದ ದುಸ್ಥಿತಿ ಹೇಳಿದ್ದರು. ಮತ್ತೆ 45 ಲಕ್ಷ ರೂ. ಅನುದಾನ ನೀಡಿ ಈಜುಕೊಳವನ್ನು ದುರಸ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಯುವ ಸಬಲೀಕರಣ ಇಲಾಖೆಯ ರೇಖ್ಯಾನಾಯ್ಕಾ, ಕ್ರೀಡಾಂಗಣ ಸಮಿತಿ ಸದಸ್ಯ ಸುರೇಶಬಾಬು, ಮಹಾಬಲ ಕೌತಿ, ಕಿರಣ್ ದೊಡ್ಮನೆ, ಅನ್ವರ್ ಭಾಷಾ, ಗಣಪತಿ ಮಂಡಗಳಲೆ, ಕಲಸೆ ಚಂದ್ರಪ್ಪ, ನಿರಂಜನ ಕೋರಿ, ಕೆ.ಆರ್.ವಿಭವಾ, ಸಾಧನಾ, ಪುರುಷೋತ್ತಮ್, ಎಚ್.ಜಿ.ಸುಬ್ರಹ್ಮಣ್ಯ ಭಟ್ ಇತರರಿದ್ದರು.