ಕಡೇನಂದಿಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು. ರೇವಣಸಿದ್ಧೇಶ್ವರ ಶ್ರೀಗಳು, ಕೆ.ಎಸ್.ಗುರುಮೂರ್ತಿ, ಬಸವರಾಜಪ್ಪ ಇತರರಿದ್ದರು. 
ಶಿವಮೊಗ್ಗ

ಯುವಜನರು ಧರ್ಮದಲ್ಲಿ ಶ್ರದ್ಧೆ, ನಿಷ್ಠೆ ಬೆಳೆಸಿಕೊಳ್ಳಲಿ

ಶಿರಾಳಕೊಪ್ಪ: ಮನುಷ್ಯ ಜೀವಿತಾವಧಿಯಲ್ಲಿ ಧರ್ಮ ಪಾಲನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕಡೇನಂದಿಹಳ್ಳಿ ಮಠದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕಡೇನಂದಿಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಮೌನ ಶಿವಾನುಷ್ಠಾನದ ಮಂಗಲ ಕಾರ್ಯಕ್ರಮ ಹಾಗೂ ಶ್ರೀ ಗುರು ಪಟ್ಟಾಧಿಕಾರ ಸಮಾರಂಭದ ಅಭಿನಂದನಾ ಸಭೆಯಲ್ಲಿ ಮಾತನಾಡಿ, ಪ್ರತಿಯೊಬ್ಬರೂ ಧರ್ಮದಲ್ಲಿ ಶ್ರದ್ಧೆ ಹಾಗೂ ನಿಷ್ಠೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಅಧಿಕ ಜ್ಯೇಷ್ಠ ಮಾಸದ ಪ್ರಯುಕ್ತ ಲೋಕಕಲ್ಯಾಣ, ಭಕ್ತರ ಇಷ್ಟಾರ್ಥ ಸಿದ್ಧಿ ಹಾಗೂ ಸಮಾಜದ ಶ್ರೇಯೋಭಿವೃದ್ಧಿಗೆ ನಡೆಸಿದ ಮೌನ ಶಿವಾನುಷ್ಠಾನದಿಂದ ಆತ್ಮಬಲ ವೃದ್ಧಿಯಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಸೇವೆ ಸಲ್ಲಿಸುವ ಸಂಕಲ್ಪ ಮೂಡಿದೆ. ಮುಂದಿನ ದಿನಗಳಲ್ಲಿ ವೀರಶೈವ ಧರ್ಮದ ಪ್ರಚಾರದ ಜತೆ ಮನೆಮನೆಗೆ ತೆರಳಿ ಧಾರ್ಮಿಕ ಸಂಸ್ಕಾರ ಬೆಳೆಸುವ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಮಾತನಾಡಿ, ಯುವಜನರಲ್ಲಿ ಮಾನಸಿಕ ಖಿನ್ನತೆ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಯುವಜನರನ್ನು ಧಾರ್ಮಿಕ ಕ್ಷೇತ್ರಗಳಿಗೆ ಕರೆತಂದು ಸಂಸ್ಕಾರ ಹಾಗೂ ಮಾನಸಿಕ ಸ್ಥೈರ್ಯ ತುಂಬುವ ಕಾರ್ಯ ನಡೆಯಬೇಕು. ಈ ಪ್ರದೇಶವನ್ನು ಪುಣ್ಯಕ್ಷೇತ್ರವಾಗಿ ರೂಪಿಸುವಲ್ಲಿ ಶ್ರೀಗಳ ಕೊಡುಗೆ ಅಪಾರ ಎಂದರು.
ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿ ಮೌನಾನುಷ್ಠಾನವನ್ನು ಮಂಗಲಗೊಳಿಸಿದರು. ಕ್ಷೇತ್ರದ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಜಗದ್ಗುರು ಶ್ರೀ ರೇವಣಸಿದ್ಧೇಶ್ವರರ ಹರಕೆ ರಥೋತ್ಸವ ಜರುಗಿತು. ಬಿಜೆಪಿ ಮುಖಂಡ ಕೆ.ಎಸ್.ಗುರುಮೂರ್ತಿ, ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜಪ್ಪ, ಪಟ್ಟದಯ್ಯ, ಬಸವರಾಜಪ್ಪ, ಯೋಗೇಶಪ್ಪ, ದೇವೇಂದ್ರಪ್ಪ, ಗುರುಶಾಂತಯ್ಯ, ಮಲ್ಲಿಕಾರ್ಜುನ, ಚನ್ನೇಶ ಶಾಸ್ತ್ರಿ, ನಾಗರಾಜ ಇತರರಿದ್ದರು.