ಆನವಟ್ಟಿಯಲ್ಲಿ ಬಿಜೆಪಿಯ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಡಾ. ಜ್ಞಾನೇಶ್, ಪ್ರಕಾಶ್, ಸುಧಾ ಶಿವಪ್ರಸಾದ್, ಕೊಟ್ರೇಶ್ ಸ್ವಾಮಿ, ಉಮೇಶ್, ಕೆರಿಯಪ್ಪ ಇತರರಿದ್ದರು.
ಆನವಟ್ಟಿ: ಶಾಸಕರು ಹಾಗೂ ಸಚಿವರು ಕೇವಲ ಚುನಾವಣಾ ಸಮಯದಲ್ಲಿ ಹಳ್ಳಿಗಳತ್ತ ಮುಖ ಮಾಡುವುದನ್ನು ಬಿಟ್ಟು ತಾವು ಅಧಿಕಾರಕ್ಕೆ ಬಂದ ನಂತರವೂ ಗ್ರಾಮಗಳತ್ತ ಹೋಗಿ ಅಲ್ಲಿನ ಕುಂದುಕೊರತೆಗಳನ್ನು ಆಲಿಸಬೇಕು ಎಂದು ಬಿಜೆಪಿ ತಾಲೂಕು ಉಪಾಧ್ಯಕ್ಷ ಡಾ. ಜ್ಞಾನೇಶ್ ಒತ್ತಾಯಿಸಿದರು.
ಸೋಮವಾರ ಆನವಟ್ಟಿಯ ಪ್ರವಾಸಿ ಮಂದಿರದಲ್ಲಿ ಬಿಜೆಪಿಯ 2026ನೇ ಸಾಲಿನ ಕ್ಯಾಲೆಂಡರ್ ಹಂಚಿಕೆ ಕಾರ್ಯಕ್ರಮ ಹಾಗೂ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಬಿಜೆಪಿ ಶಾಸಕರು ಅಧಿಕಾರಲ್ಲಿದ್ದಾಗ ಪ್ರಾರಂಭಗೊಂಡ ಕಾಮಗಾರಿಗಳು ಈವರೆಗೂ ನನೆಗುದಿಗೆ ಬಿದ್ದಿವೆ. ಅವುಗಳನ್ನು ಹಾಲಿ ಶಾಸಕರು ಪೂರ್ಣಗೊಳಿಸುವಲ್ಲಿ ಉತ್ಸಾಹ ತೋರುತ್ತಿಲ್ಲ. ಹೀಗಾಗಿ ಬಿಜೆಪಿ ಗ್ರಾಮೀಣ ಹಾಗೂ ತಾಲೂಕು ನಾಯಕರೆಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕಿದೆ ಎಂದರು.
ತಾಲೂಕು ಮಂಡಲ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ, ಜಿಲ್ಲಾ ಸಮಿತಿ ಸದಸ್ಯೆ ಸುಧಾ ಶಿವಪ್ರಸಾದ್, ಆನವಟ್ಟಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕೊಟ್ರೇಶ್ ಸ್ವಾಮಿ, ಮುಖಂಡರಾದ ಉಮೇಶ್, ಕೆರಿಯಪ್ಪ, ಮಲ್ಲಿಕಾರ್ಜುನ ಗುತ್ತೇರ, ಶಿವರಾಜ್, ರಾಜು ಬಡಗಿ ಇತರರಿದ್ದರು.