ಸಾಗರ: ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಅಣ್ಣ-ಬಾವ ಸೇರಿ ಮುಖ್ಯಮಂತ್ರಿಗಳ ಮನವೊಲಿಸಿ ಒಂದಷ್ಟು ಅನುದಾನ ತರಲಿ. ಬಾಯಿ ಮಾತಿನಲ್ಲಿ ಕೋಟ್ಯಂತರ ರೂ. ಅನುದಾನ ಬಂದಿದೆ ಎಂದು ಜನರಿಗೆ ತಪ್ಪು ಲೆಕ್ಕ ಕೊಡುವ ಬದಲು ದಾಖಲೆ ಸಹಿತ ಮಧು ಬಂಗಾರಪ್ಪ, ಗೋಪಾಲಕೃಷ್ಣ ಜನರಿಗೆ ತಿಳಿಸಲಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಹರತಾಳು ಹಾಲಪ್ಪ ಸವಾಲೆಸೆದರು.
ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಮೂರು ವರ್ಷಗಳಾಗಿವೆ. ರಾಜ್ಯದ ಯಾವ ತಾಲೂಕಿನಲ್ಲೂ ಅಭಿವೃದ್ಧಿ ಕೆಲಸವಾಗಿಲ್ಲ. ಸಾಗರ ತಾಲೂಕಿನಲ್ಲಿ ಮಾತ್ರ ಅಭಿವೃದ್ಧಿಗೆ ಕೋಟ್ಯಂತರ ರೂ. ಬಂದಿದೆ ಎಂದು ಸುಳ್ಳು ಹೇಳಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಂತ್ರಿಯಾದ ತಕ್ಷಣ ಅನೇಕ ಭರವಸೆಗಳನ್ನು ನೀಡಿದ್ದರು. ಅದ್ಯಾವುದೂ ಈಡೇರಿಲ್ಲ. ಇದೀಗ ಒಂದು ಸಾವಿರ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)ಗಳನ್ನು ತೆರೆದು, ಬಸ್ ಸೌಲಭ್ಯ ಕಲ್ಪಿಸುತ್ತೇವೆ ಎಂದು ಹೇಳಿದ್ದಾರೆ. ಒಂದು ಕೆಪಿಎಸ್ ತೆರೆಯಲು 25 ಕೋಟಿ ರೂ. ಬೇಕಾಗುತ್ತದೆ. ಅಷ್ಟೊಂದು ಹಣ ಎಲ್ಲಿಂದ ತರುತ್ತಾರೆ. ಹಾಗೆ ನೋಡಿದರೆ ಖಾಲಿ ಇರುವ ಶಿಕ್ಷಕ ಹುದ್ದೆಯನ್ನೂ ಭರ್ತಿ ಮಾಡಿಲ್ಲ. ಒಂದು ಸಾವಿರ ಬಸ್ ಇರಿಸಿದರೆ ಅವುಗಳಿಗೆ ಚಾಲಕರ ನೇಮಕ ಹೇಗೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಸಾಗರ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸಿದೆ. ಯಾವ ಇಲಾಖೆಯಲ್ಲೂ ಅಧಿಕಾರಿಗಳು ಇಲ್ಲ. ಪ್ರಮುಖ ಸ್ಥಾನಗಳಲ್ಲಿ ಪ್ರಭಾರಿಗಳೇ ತುಂಬಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಪ್ಪ ಎಲ್ಲ ಅಧಿಕಾರಿಗಳು ಇದ್ದಾರೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಯಾವ್ಯಾವ ಇಲಾಖೆಯಲ್ಲಿ ಕಾಯಂ ಅಧಿಕಾರಿಗಳಿದ್ದಾರೆ ಎಂಬುದನ್ನು ಅವರು ಬಹಿರಂಗಪಡಿಸಲಿ. ಸುಳ್ಳು ಹೇಳಿ ಜನರನ್ನು ಭ್ರಮೆಯಲ್ಲಿಡುವ ಪ್ರಯತ್ನ ನಡೆಯುತ್ತಿದೆ ಎಂದರು.
ಟ್ಯಾಗೋರ್ ಕಲ್ಚರಲ್ ಕಾಂಪ್ಲೆಕ್ಸ್ ನಿರ್ಮಿಸಲು ನಾನು ಶಾಸಕನಾಗಿದ್ದ ಸಂದರ್ಭ 4.80 ಕೋಟಿ ರೂ. ಅನುದಾನ ತರಲಾಗಿತ್ತು. ಆ ಹಣ ಬ್ಯಾಂಕಿನಲ್ಲಿ ಇಷ್ಟು ದಿನ ಹಾಗೆಯೇ ಇತ್ತು. ಇದೀಗ ಶಾಸಕರು ರಂಗಮಂದಿರ ನಿರ್ಮಾಣಕ್ಕೆ ಸಾರ್ವಜನಿಕರ ಸಲಹೆ ಕೇಳುತ್ತಿದ್ದಾರೆ. ಮೂರು ವರ್ಷಗಳವರೆಗೆ ಶಾಸಕರು ಯಾಕೆ ಪ್ರಯತ್ನ ಮಾಡಿಲ್ಲ? ಒಳಚರಂಡಿ ಕಾಮಗಾರಿಗೆ ಮೊದಲು 71 ಕೋಟಿ ರೂ. ಖರ್ಚು ಮಾಡಲಾಗಿತ್ತು. ಈಗಿನ ಶಾಸಕರು ನಾನು 20 ಕೋಟಿ ರೂ. ಅನುದಾನ ತಂದಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ಯಾವುದೇ ಕಾಮಗಾರಿ ನಡೆದಂತೆ ಕಾಣುತ್ತಿಲ್ಲ. ಹಾಗಾಗಿ ಒಳಚರಂಡಿ ಕಾಮಗಾರಿಯನ್ನು ತನಿಖೆಗೆ ಒಳಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ದೇವೇಂದ್ರಪ್ಪ, ಗಣೇಶಪ್ರಸಾದ್, ಮಲ್ಲಿಕಾರ್ಜುನ ಹಕ್ರೆ, ಎಚ್.ಎಸ್.ರಮೇಶ್, ಅರುಣ ಕುಗ್ವೆ, ಸುಜಯ್ ಶೆಣೈ, ಬೈರಪ್ಪ, ಬಂಗಾರಪ್ಪ, ಗಿರೀಶ್ ಗುಳ್ಳಳ್ಳಿ, ಪರಶುರಾಮ, ಶ್ರೀಧರ ಜೋಗಿ, ಸತೀಶ್ ಇತರರಿದ್ದರು.
ಹಸಿರುಮಕ್ಕಿ ಸೇತುವೆ ಇನ್ನೂ ಮಗಿದಿಲ್ಲ
ಹಸಿರುಮಕ್ಕಿ ಸೇತುವೆ ಕಾಮಗಾರಿ ಹಿನ್ನಡೆಗೆ ಹಾಲಪ್ಪ ಕಾರಣ ಎಂದು ಹಾಲಿ ಶಾಸಕರು ದೂರಿದ್ದರು. ಸಿಗಂದೂರು ಸೇತುವೆ ಲೋಕಾರ್ಪಣೆ ಸಂದರ್ಭದಲ್ಲಿ ಮೇ ತಿಂಗಳಿನೊಳಗೆ ಹಸಿರುಮಕ್ಕಿ ಸೇತುವೆ ಉದ್ಘಾಟನೆ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಭಾಷಣ ಮಾಡಿದ್ದರು. ಆದರೆ ಇದುವರೆಗೆ ಸೇತುವೆ ಕಾಮಗಾರಿ ಮುಗಿದಿಲ್ಲ. ಹಣಕಾಸಿನ ಸಮಸ್ಯೆಯಿಂದ ಸೇತುವೆ ಕಾಮಗಾರಿ ನಿಂತಿದೆ. ಮಧು ಬಂಗಾರಪ್ಪ, ಗೋಪಾಲಕೃಷ್ಣ ಬೇಳೂರು ಇಬ್ಬರೂ ಸೇರಿ ಮುಖ್ಯಮಂತ್ರಿಗಳಿಂದ ಹಣ ಬಿಡುಗಡೆ ಮಾಡಿಸಲಿ. ಜತೆಗೆ ತಾಲೂಕಿನಲ್ಲಿ ಬಳಸಗೋಡು, ತ್ಯಾಗರ್ತಿ, ಕಾಗೋಡು ಗ್ರಾಮದ ವಿದ್ಯುತ್ ಗ್ರಿಡ್‌ಗಳನ್ನು ತಕ್ಷಣ ಉದ್ಘಾಟನೆ ಮಾಡಿಸಲು ಎಂದು ಹರತಾಳು ಹಾಲಪ್ಪ ಆಗ್ರಹಿಸಿದರು.