ಶಿಕಾರಿಪುರ: ಟೋಲ್ ತೆರವು ವಿಚಾರದಲ್ಲಿ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಉಸ್ತುವಾರಿ ಸಚಿವರು ಈ ಬಗ್ಗೆ ಯಾವುದೇ ರೀತಿ ಪ್ರತಿಕ್ರಿಯಿಸುತ್ತಿಲ್ಲ ಎಂದು ಟೋಲ್ ಹೋರಾಟ ಸಮಿತಿ ಅಧ್ಯಕ್ಷ ಶಿವರಾಜ್ ಹೇಳಿದರು.
ಟೋಲ್‌ನಿಂದ ಪ್ರತಿದಿನ ತಾಲೂಕು ಕೇಂದ್ರವಾದ ಶಿಕಾರಿಪುರಕ್ಕೆ ಬಂದು ಹೋಗುವವರಿಗೆ ಬಹಳ ತೊಂದರೆಯಾಗುತ್ತಿದೆ. ಈ ಬಗ್ಗೆ ಸಮಿತಿಯಿಂದ ಶಿಕಾರಿಪುರ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದು, ಜನತೆ ನಿರೀಕ್ಷೆ ಮೀರಿ ಬೆಂಬಲ ನೀಡಿದ್ದಾರೆ. ಇದು ಯಾರ ಮನೆಯ ಸ್ವಂತ
ಕೆಲಸವಲ್ಲ. ಇದು ಸಮಾಜದ ಕೆಲಸ. ಜನತೆಯ ನೋವುಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಸಂಸದರು ಮತ್ತು ಶಾಸಕರು ಟೋಲ್ ತೆರವಿನ ವಿಚಾರದಲ್ಲಿ ಸರ್ಕಾರದ ಮೇಲೆ ಇನ್ನೂ ಹೆಚ್ಚಿನ ಒತ್ತಡ ತಂದು ಟೋಲ್ ತೆರವುಗೊಳಿಸಬೇಕು. ಶಾಸಕರು ಚಳಿಗಾಲದ ಅವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿ ಟೋಲ್ ತೆರವುಗೊಳಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತರಬೇಕು.
ಅವೈಜ್ಞಾನಿಕವಾಗಿ ನಿರ್ಮಿಸಿರುವ ಟೋಲ್‌ನಿಂದ ತಾಲೂಕಿನ ಜನರಿಗೆ ಆಗುತ್ತಿರುವ ತೊಂದರೆಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದರು.
ರೈತ ಮುಖಂಡರಾದ ಪುಟ್ಟನಗೌಡ, ಈರಣ್ಣ ಪ್ಯಾಟಿ, ಚಂದ್ರಕಾಂತ್ ರೇವಣಕರ್ ಇತರರಿದ್ದರು.