ಸೊರಬದಲ್ಲಿ ಆಯೋಜಿಸಿದ್ದ ಎಸ್‌ಐಆರ್, ಬಿಜೆಪಿ ಮಂಡಲ ಪ್ರಮುಖರ ಸಭೆಯಲ್ಲಿ ಡಾ. ಜ್ಞಾನೇಶ್, ಪ್ರಕಾಶ್ ಅಗಸನಹಳ್ಳಿ, ರಾಜು, ಮಲ್ಲಿಕಾರ್ಜುನ ದ್ವಾರಳ್ಳಿ ಇದ್ದರು.
ಸೊರಬ: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಬೂತ್‌ಮಟ್ಟದ ಕಾರ್ಯಕರ್ತರು ನಿಗಾವಹಿಸಬೇಕು ಎಂದು ಬಿಜೆಪಿ ತಾಲೂಕು ಉಪಾಧ್ಯಕ್ಷ ಡಾ. ಜ್ಞಾನೇಶ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಎಸ್‌ಐಆರ್ ಹಾಗೂ ಬಿಜೆಪಿ ಮಂಡಲ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ 239 ಬೂತ್‌ಗಳಿಗೂ ಬಿಜೆಪಿಯಿಂದ ಬಿಎಲ್‌ಎಗಳನ್ನು ನೇಮಿಸಿ ಎಸ್‌ಐಆರ್‌ನಿಂದ ಅರ್ಹ ಮತದಾರರು ಹೊರಗುಳಿಯದಂತೆ ಮಾಹಿತಿ ನೀಡಲಾಗಿದೆ ಎಂದರು.
ಪ್ರತಿ ಬೂತ್, ಶಕ್ತಿ ಮತ್ತು ಮಹಾಶಕ್ತಿ ಕೇಂದ್ರದಲ್ಲಿ ಈಗಾಗಲೇ ಸಭೆ ನಡೆಸಲಾಗಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಮುನ್ನೆಡೆಸಲು ಪ್ರತಿಯೊಂದು ಮತವೂ ಮುಖ್ಯ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಾಗಿ ಭಾಗವಹಿಸಲು ಸಿದ್ಧತೆ ನಡೆಸಿದೆ. ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರ ಪಾತ್ರ ಅತಿ ಮುಖ್ಯ. ವ್ಯಕ್ತಿಗಿಂತ ಪಕ್ಷ ದೊಡ್ಡದು. ಪಕ್ಷ ಸಿದ್ಧಾಂತಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದರು.
ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ದ್ವಾರಳ್ಳಿ ಮಾತನಾಡಿ, ಎಸ್.ಬಂಗಾರಪ್ಪ ಅವರ ಮೇಲೆ ಇದ್ದ ಗೌರವಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕುಮಾರ್ ಬಂಗಾರಪ್ಪ ಅವರಿಗೆ 2018ರಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸಿ ಗೆಲ್ಲಿಸಿದ್ದರು. ಆದರೆ ಈಗ ಅವರು ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಹೇಳಿಕೆ ನೀಡುವ ಮನಸ್ಥಿತಿಯನ್ನು ತಿದ್ದಿಕೊಳ್ಳದಿದ್ದರೆ ಅದರ ಪರಿಣಾಮ ಎದರಿಸಲಿದ್ದಾರೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ, ಯುವ ಮೋರ್ಚಾ ಅಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ಸುರೇಶ್, ಮುಖಂಡರಾದ ಪಾಣಿ ರಾಜಪ್ಪ, ಗಜಾನನ ರಾವ್, ಯೋಗೇಶ್, ದೇವೇಂದ್ರಪ್ಪ, ವಿಜಯೇಂದ್ರ, ಗುರುಪ್ರಸನ್ನ ಗೌಡ, ಪರಮೇಶ್ವರ ಇತರರಿದ್ದರು.