ಬಿ.ವೈ.ರಾಘವೇಂದ್ರ ದೆಹಲಿಯಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾಗಿ ಅಡಕೆಗೆ ಸಂಬಂಧಿಸಿದ
- ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಒತ್ತಾಯ
- ಸಚಿವ ಶಿವರಾಜ್ ಸಿಂಗ್ ಚೌಹಾಣ್‌ಗೆ ಮನವಿ
ಶಿವಮೊಗ್ಗ: ವಿಶ್ವ ಆರೋಗ್ಯ ಸಂಸ್ಥೆ ಅಡಿಕೆ (areca) ಯನ್ನು ಕ್ಯಾನ್ಸರ್ (cancer) ಕಾರಕ ಎಂದು ವರ್ಗೀಕರಿಸಿ ಅದಕ್ಕೆ ಕೆಟ್ಟದಾದ ಹಣೆಪಟ್ಟಿ ಹಚ್ಚಿರುವುದು ವೈಜ್ಞಾನಿಕವಾಗಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅಡಿಕೆ ಬೆಳೆಗಾರರ ಪರ ಪ್ರಬಲವಾಗಿ ವಾದ ಮಂಡಿಸಬೇಕೆಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ (raghavendra) ಒತ್ತಾಯಿಸಿದ್ದಾರೆ.
ನವದೆಹಲಿಯಲ್ಲಿ ಮಂಗಳವಾರ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಿವೈಆರ್, ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ದೇಶದ ಒಟ್ಟು ಅಡಿಕೆ ಉತ್ಪಾದನೆಯ ಸುಮಾರು ಶೇ.65ರಷ್ಟನ್ನು ಪೂರೈಸುವ ಮಲೆನಾಡಿನ ಅಡಿಕೆ ಬೆಳೆಗಾರರು ತೀವ್ರ ಆತಂಕ ಮತ್ತು ಸಂಕಷ್ಟದಲ್ಲಿದ್ದು ಅವರ ಪರವಾಗಿ ರಾಘವೇಂದ್ರ ಮತ್ತೊಮ್ಮೆ ಧ್ವನಿ ಎತ್ತಿದ್ದಾರೆ.
ಸುಮಾರು ಒಂದು ಲಕ್ಷ ಕೋಟಿ ರೂ. ಆರ್ಥಿಕತೆ ಹೊಂದಿರುವ, 11 ರಾಜ್ಯಗಳ ಎರಡು ಕೋಟಿಗೂ ಅಧಿಕ ಜನರ ಜೀವನಾಧಾರವಾಗಿರುವ ಅಡಿಕೆ ಬೆಳೆಯ ರಕ್ಷಣೆ ಇಂದು ಆದ್ಯತೆಯ ವಿಷಯವಾಗಬೇಕಿದೆ ಎಂದು ಪ್ರತಿಪಾದಿಸಿದ್ದಾರೆ. ಭಾರತದ ಐಎಆರ್‌ಸಿ, ಸಿಪಿಸಿಆರ್‌ಐ ನಡೆಸಿರುವ ಸಂಶೋಧನೆಗಳ ಪ್ರಕಾರ, ಉಲ್ಲೇಖಿಸಿರುವ ಬಹಳಷ್ಟು ಅಧ್ಯಯನಗಳು, ತಂಬಾಕು ಮಿಶ್ರಿತ ಉತ್ಪನ್ನಗಳನ್ನು ಶುದ್ಧ ಅಡಿಕೆಯೊಂದಿಗೆ ತಾಳೆ ಮಾಡಿ ತಪ್ಪು ತೀರ್ಮಾನಕ್ಕೆ ಬಂದಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮೇ 2025ರಲ್ಲಿ ಅಮೆರಿಕ ವಿಷಕಾರಿ ಅಂಶವನ್ನು ಹೊಂದಿದೆ ಎಂದು ಅಡಿಕೆ ಹಾಳೆಯ ತಟ್ಟೆಗಳ ಮೇಲೆ ನಿಷೇಧ ಹೇರಿರುವುದರಿಂದ ಗ್ರಾಮೀಣ ಕೈಗಾರಿಕೆಗಳಿಗೆ ಗಂಭೀರ ಪೆಟ್ಟು ಬಿದ್ದಂತಾಗಿದೆ. ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಡಿ ಪರಿಸರಸ್ನೇಹಿ ಆಶಯಗಳಿಗೆ ತದ್ವಿರುದ್ಧವಾಗಿರುವ ಈ ನಿಷೇಧವನ್ನು ವೈಜ್ಞಾನಿಕವಾಗಿ ಮತ್ತು ರಾಜತಾಂತ್ರಿಕವಾಗಿ ಪ್ರಶ್ನಿಸಬೇಕು. ತಜ್ಞರನ್ನೊಳಗೊಂಡ ಉನ್ನತ ಮಟ್ಟದ ತಾಂತ್ರಿಕ ನಿಯೋಗವನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಕಳುಹಿಸಿ ವಾಸ್ತವಾಂಶಗಳನ್ನು ಮನದಟ್ಟು ಮಾಡಿಸಬೇಕು.
ಅಡಿಕೆ ಹಾಳೆ ತಟ್ಟೆಗಳಿಗೆ ಅಂತಾರಾಷ್ಟ್ರೀಯ ವ್ಯಾಪಾರ ಮಂಡಳಿಗಳ ಮೂಲಕ ವೈಜ್ಞಾನಿಕ ಮಾನ್ಯತೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು.
ಕೇಂದ್ರ ಸಚಿವರ ಭರವಸೆ
ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಅವರ ಮನವಿಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ದೇಶದ 11 ಪ್ರಮುಖ ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಈಗಾಗಲೇ ಅಡಿಕೆ ಕುರಿತು ಸಂಶೋಧನೆ ನಡೆಸುತ್ತಿದ್ದು ಶೀಘ್ರದಲ್ಲೇ ಒಂದು ಸಮಗ್ರ ವರದಿ ಸಿದ್ಧವಾಗಲಿದೆ. ಅಂತಿಮ ವರದಿ ಕೇಂದ್ರ ಸರ್ಕಾರಕ್ಕೆ ಲಭಿಸಿದ ತಕ್ಷಣ, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಭರವಸೆ ನೀಡಿದರು.
ನಮ್ಮ ಸಂಸ್ಕೃತಿಯಲ್ಲಿ ಅಡಿಕೆ ಮಂಗಳ ದ್ರವ್ಯ ಮಾತ್ರವಲ್ಲ, ಅದು ಲಕ್ಷಾಂತರ ಕುಟುಂಬಗಳ ಬದುಕಿಗೆ ಆಧಾರವಾಗಿದೆ. ಕೇವಲ ಶಿವಮೊಗ್ಗ ಜಿಲ್ಲೆಯಲ್ಲಿ ದೇಶದ ಅನೇಕ ರಾಜ್ಯಗಳ ಆರ್ಥಿಕತೆಗೆ ಅಡಿಕೆ ಸಾಕಷ್ಟು ಶಕ್ತಿ ತುಂಬಿದೆ. ಲಕ್ಷಾಂತರ ಕುಟುಂಬಗಳು ಇದನ್ನೇ ಅವಲಂಬಿಸಿವೆೆ.