ಹೊಸನಗರ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು. ಭರತ್‌ರಾಜ್, ನರೇಂದ್ರಕುಮಾರ್, ಸಂತೋಷ್ ಇದ್ದರು. 
ಶಿವಮೊಗ್ಗ

ಅತಿವೃಷ್ಟಿ ಪ್ರದೇಶಗಳ ಸಂತ್ರಸ್ತರಿಗೆ ಅಧಿಕಾರಿಗಳು ಸ್ಪಂದಿಸಲಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಆರಗ ಜ್ಞಾನೇಂದ್ರ ಸೂಚನೆ
  • ಹೊಸನಗರ ತಾಪಂ ಸಭಾಂಗಂಣದಲ್ಲಿ ಕೆಡಿಪಿ ಸಭೆ
  • ಮನೆ ಕುಸಿತ ಪ್ರಕರಣಗಳಲ್ಲಿ ಪರಿಹಾರ ಒದಗಿಸಿ
ಹೊಸನಗರ: ತಾಲೂಕಿನಲ್ಲಿ ಒಂದು ವಾರದಿಂದ ಮಳೆ ಹೆಚ್ಚಾಗಿದ್ದು, ಅತಿವೃಷ್ಟಿಯಿಂದ ಹಾನಿ ಉಂಟಾಗಿದ್ದಲ್ಲಿ ಅಧಿಕಾರಿಗಳು ಸ್ಪಂದಿಸಬೇಕು. ಸಂತ್ರಸ್ತರ ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಅಧಿಕಾರಿಗಳು ತಾಲೂಕು ಕೇಂದ್ರದಲ್ಲಿದ್ದು ಕರ್ತವ್ಯ ನಿರ್ವಹಿಸಬೇಕು. ಮನೆ ಕುಸಿತ ಪ್ರಕರಣಗಳಲ್ಲಿ ತಕ್ಷಣ ಪರಿಹಾರ ನೀಡಬೇಕು. ಭಾಗಶಃ ಹಾನಿಯಾದರೂ ಹಣ ನೀಡಬೇಕು. ಯಾವ ಕಾರಣಕ್ಕೂ ನಿರ್ಲಕ್ಷೃ ತೋರಬಾರದು ಎಂದು ಸೂಚಿಸಿದರು.
ತಾಲೂಕಿನ ಹೆದ್ದಾರಿಗಳು ಸೇರಿ ಮುಖ್ಯ ರಸ್ತೆ, ಸಂಪರ್ಕ ರಸ್ತೆಗಳು ಸಂಪೂರ್ಣ ಹಾಳಾಗಿವೆ. ರಸ್ತೆ ಇಕ್ಕೆಲಗಳಲ್ಲಿ ಇರುವ ಚರಂಡಿಗಳಲ್ಲಿ ಹೂಳು ತುಂಬಿದೆ. ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಚರಂಡಿ ಸರಿಪಡಿಸದಿರುವ ಕಾರಣಕ್ಕೆ ರಸ್ತೆಗಳು ಹಾಳಾಗಿವೆ. ಚರಂಡಿಗಳಲ್ಲಿ ಹೂಳು ತೆಗೆಸಲು ಗ್ರಾಪಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಹಳ್ಳ ಹಿಡಿದ ಜೆಜೆಎಂ: ಹೊಸನಗರ ತಾಲೂಕಿನಲ್ಲಿ ಕುಡಿಯುವ ನೀರು ಯೋಜನೆ ಜೆಜೆಎಂ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಇಲಾಖೆಗಳ ಪ್ರತಿಷ್ಠೆಯಿಂದ ಯೋಜನೆ ಹಳ್ಳ ಹಿಡಿಯುತ್ತಿದೆ. ಎಲ್ಲ ಸಮಸ್ಯೆಗಳನ್ನು ಸರಿಪಡಿಸಿಕೊಂಡು ನಿರೀಕ್ಷಿತ ಗುರಿ ಸಾಧಿಸಬೇಕು ಎಂದು ಶಾಸಕ ಜ್ಞಾನೇಂದ್ರ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನ ಕೆಲವೆಡೆ ಕಂದಾಯ ಭೂಮಿ ಒತ್ತುವರಿ ನಡೆಯುತ್ತಿದೆ. ಅಧಿಕಾರಿಗಳು ಅಕ್ರಮವನ್ನು ತಡೆಗಟ್ಟಬೇಕು. ಹೊಸ ಒತ್ತುವರಿ ಮಾಡಿದ್ದರೆ ಕೂಡಲೇ ತೆರವುಗೊಳಿಸಬೇಕು. ಕಂದಾಯ ಭೂಮಿ ಉಳಿಸುವಲ್ಲಿ ಜಾಗೃತರಾಗಬೇಕು ಎಂದು ತಿಳಿಸಿದರು.
ತಾಲೂಕಿನಲ್ಲಿ ಕರೆಂಟ್ ಸಮಸ್ಯೆ ಇದ್ದು, ಒಮ್ಮೆ ಹೋದರೆ ವಾರ ಕಳೆದರೂ ಬರುವುದಿಲ್ಲ. ಯಡೂರು, ನಿಟ್ಟೂರು, ನಗರ, ಮಾಸ್ತಿಕಟ್ಟೆ ಭಾಗಗಳಲ್ಲಿ ಸಮಸ್ಯೆ ಅಧಿಕ. ಲೈನ್‌ಮನ್‌ಗಳಿಗೆ ಮೇಲಧಿಕಾರಿಗಳು ಸೂಚನೆ ನೀಡಬೇಕು. ರಸ್ತೆಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವು ಮಾಡಬೇಕು. ಅಪಾಯ ಸಂಭವಿಸಿದರೆ ಅರಣ್ಯ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ತಿಳಿಸಿದರು.
ಸಾಮಾಜಿಕ ಭದ್ರತಾ ಯೋಜನೆಯಡಿ ಅರ್ಹರಿಗೆ ಸೌಲಭ್ಯ ಹಂಚಿಕೆ ಆಗಿಲ್ಲ. ಈ ಕುರಿತ ಸಮಸ್ಯೆ ಸರಿಪಡಿಸಿ ಸೌಲಭ್ಯ ತಲುಪಿಸಬೇಕು. ಲಾನುಭವಿಗಳ ಮನೆಗೆ ಹೋಗಿ ಅವರ ಸಮಸ್ಯೆ ಆಲಿಸಿ ಬಗೆಹರಿಸಬೇಕು ಎಂದರು. ತಹಸೀಲ್ದಾರ್ ಭರತ್‌ರಾಜ್, ತಾಪಂ ಇಒ ನರೇಂದ್ರಕುಮಾರ್, ಅರಣ್ಯ ಅಧಿಕಾರಿ ಸಂತೋಷ್ ಇತರರಿದ್ದರು.