ಮಹಿಳಾ ದಿನಾಚರಣೆ ಅಂಗವಾಗಿ ಉಳ್ಳೂರು ಸಿಗಂದೂರೇಶ್ವರಿ ಕಾಲೇಜಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಅಂತರ ಕಾನೂನು ಕಾಲೇಜು ಮಹಿಳಾ ಥ್ರೋಬಾಲ್-ಟೆನ್ನಿಕಾಯ್ಟಿ ಪಂದ್ಯಾವಳಿಯನ್ನು ಸಾಗರ ಎಸಿ ವೀರೇಶ್‌ಕುಮಾರ್ ಉದ್ಘಾಟಿಸಿದರು. ಕಾವ್ಯಾ, ಕೃಷ್ಣಮೂರ್ತಿ ಬಿಳಿಗಲ್ಲೂರು, ಡಾ. ಖಾಲಿದ್ ಖಾನ್, ಕೆ.ಮಮತಾ ಇತರರಿದ್ದರು. 
ಶಿವಮೊಗ್ಗ

ಕ್ರೀಡಾ ಸ್ಫೂರ್ತಿ ಆಟಗಾರರ ಧ್ಯೇಯವಾಗಲಿ | Sports

ತ್ಯಾಗರ್ತಿ: ಕಾನೂನು ಶಾಸ್ತ್ರ ಕಲಿಯುವವರಿಗೆ ಕ್ರೀಡೆ ಸೇರಿ ಇತರ ಜ್ಞಾನಗಳ ಅರಿವು ಅಗತ್ಯ. ಕಲಿಕೆಯೊಂದಿಗೆ ಬೇರೆ ಕ್ಷೇತ್ರಗಳಲ್ಲೂ ಯಶಸ್ಸು ಗಳಿಸಬೇಕು ಎಂದು ಸಾಗರ ಉಪವಿಭಾಗಾಧಿಕಾರಿ ವೀರೇಶ್‌ಕುಮಾರ್ ತಿಳಿಸಿದರು.
ಮಹಿಳಾ ದಿನಾಚರಣೆ ಅಂಗವಾಗಿ ಸಾಗರ ತಾಲೂಕಿನ ಉಳ್ಳೂರು ಸಿಗಂದೂರೇಶ್ವರಿ ಕಾಲೇಜಿನಲ್ಲಿ ಮಂಗಳವಾರ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ, ಸಿಗಂದೂರೇಶ್ವರಿ ಎಜುಕೇಷನಲ್ ಟ್ರಸ್ಟ್ ಮತ್ತು ಸಾಗರ ಗಂಗೋತ್ರಿ ಕಾನೂನು ಕಾಲೇಜು ಅಶ್ರಯದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಅಂತರ ಕಾನೂನು ಕಾಲೇಜು ಮಹಿಳಾ ಥ್ರೋಬಾಲ್-ಟೆನ್ನಿಕಾಯ್ಟಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಅಂಧರ ಮಹಿಳಾ ವಿಶ್ವಕಪ್ ಕ್ರಿಕೆಟ್ ವಿಜೇತ ಭಾರತ ತಂಡದ ಆಟಗಾರ್ತಿ ಕಾವ್ಯಾ ಅವರನ್ನು ಸನ್ಮಾನಿಸುತ್ತಿರುವುದು ಅತ್ಯಂತ ಸಂತೋಷ ತಂದಿದೆ. ಅವರು ಇತರೆ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಸಾಧನೆ ಎಲ್ಲರಿಗೂ ಪ್ರೇರಣೆ ನೀಡುವಂಥದ್ದು. ಕ್ರೀಡಾಸ್ಫೂರ್ತಿ ಪಂದ್ಯಾವಳಿಯ ಧ್ಯೇಯವಾಗಿರಲಿ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂಧ ಮಹಿಳಾ ಟಿ-20 ವಿಶ್ವಕಪ್ ವಿಜೇತ ಭಾರತ ತಂಡದ ಆಟಗಾರ್ತಿ ಕಾವ್ಯಾ, ಹುಟ್ಟುವಾಗಲೇ ಅಂಧತ್ವದ ಜತೆ ಹುಟ್ಟಿದ್ದೇನಲ್ಲ ಎಂಬ ಬೇಸರ ನನಗೆ ಇತ್ತು. ಯಾವಾಗ ಭಾರತ ತಂಡದ ಭಾಗವಾಗಿ ವಿಶ್ವಕಪ್ ಗೆದ್ದು ತಂದೆವೋ ಅಂದಿನಿಂದ ನನ್ನಲ್ಲಿರುವ ಬೇಸರ ದೂರವಾಗಿ ಏನನ್ನಾದರೂ ಸಾಧಿಸಬಹುದು ಎನ್ನುವ ವಿಶ್ವಾಸ ಮೂಡಿದೆ. ನಮ್ಮ ದೇಶದ ಬಾವುಟ ಬೇರೆ ದೇಶದಲ್ಲಿ ಹಾರಿಸಿದಾಗ ರೋಮಾಂಚನವಾಗಿತ್ತು ಎಂದು ತಿಳಿಸಿದರು.
ಸಿಗಂದೂರೇಶ್ವರಿ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ಬಿಳಿಗಲ್ಲೂರು, ಡಾ. ಖಾಲಿದ್ ಖಾನ್, ಕೆ.ಮಮತಾ, ಶ್ರೀಕಾಂತ್, ಪ್ರಾಚಾರ್ಯ ವಿ.ಎಸ್.ವಿನಯ್, ಬಾರ್ ಕೌನ್ಸಿಲ್ ಅಧ್ಯಕ್ಷ ಗಿರೀಶ್ ಗೌಡ, ಉಪನ್ಯಾಸಕರಾದ ರೇವತಿ ಹೆಗಡೆ , ಜ್ಯೋತಿ, ಚಿದಾನಂದ ಇತರರಿದ್ದರು.