ಶಿವಮೊಗ್ಗದ ಡಿವಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯನ್ನು ಎಂ.ಎಸ್.ಸಂತೋಷ್ ಉದ್ಘಾಟಿಸಿದರು. ಕೆ.ಬಸಪ್ಪ ಗೌಡ, ಎಸ್.ಪಿ.ದಿನೇಶ್, ವೇಣುಗೋಪಾಲ್, ರಾಘವೇಂದ್ರ ಸ್ವಾಮಿ, ಭಾರತಿ ಬಣಕಾರ್, ರಘುನಾಥ್ ಇದ್ದರು.
- ನ್ಯಾಯಾಧೀಶ ಎಂ.ಎಸ್.ಸಂತೋಷ್ ಆಶಯ
- ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಯಲ್ಲಿ ಮಕ್ಕಳ ಪಾತ್ರ ಅಪಾರ
ಶಿವಮೊಗ್ಗ: ಪ್ರತಿ ಮಗುವೂ ಶಿಕ್ಷಣ (education) ಪಡೆದು ಸಮಾಜದ ಮುಖ್ಯವಾಹಿನಿಗೆ ಬಂದಾಗ ಬಾಲಕಾರ್ಮಿಕ (child labour) ಪದ್ಧತಿ ನಿರ್ಮೂಲನೆ ಸಾಧ್ಯ. ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಲು ಸರ್ಕಾರ 14 ವರ್ಷದವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು (law) ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಹೇಳಿದರು.
ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಶಿಕ್ಷಣ ಇಲಾಖೆ, ಜಿಲ್ಲಾ ವಕೀಲರ ಸಂಘ, ಹಾಲು ಒಕ್ಕೂಟ ಹಾಗೂ ದೇಶೀಯ ವಿದ್ಯಾಶಾಲಾ ಸಮಿತಿ ಆಶ್ರಯದಲ್ಲಿ ಶುಕ್ರವಾರ ಡಿವಿಎಸ್‌ನಲ್ಲಿ ಏರ್ಪಡಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಯಲ್ಲಿ ಮಕ್ಕಳ ಪಾತ್ರ ಅಪಾರ. ಪ್ರತಿ ಮಗುವೂ ಜಾಗೃತ ನಾಗರಿಕರಾಗಿ ಸಮಾಜ ಬದಲಾವಣೆಯ ರಾಯಭಾರಿಗಳಾಗಬೇಕು. ಎಲ್ಲ ಮಕ್ಕಳು ಶಿಕ್ಷಣ ಪಡೆಯಬೇಕು. ಸುತ್ತಮುತ್ತಲಿನ ಯಾವುದೇ ಮಗು ಶಾಲೆಯಿಂದ ಹೊರಗುಳಿದಿರುವುದು ಅಥವಾ ಕೆಲಸಕ್ಕೆ ಹೋಗುತ್ತಿರುವುದನ್ನು ಗಮನಿಸಿದರೆ ಶಿಕ್ಷಕರಿಗೆ, ಕಾರ್ಮಿಕ ಇಲಾಖೆಗೆ ಅಥವಾ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ತಿಳಿಸಬೇಕು ಎಂದರು.
ಶಿಕ್ಷಣವನ್ನು ಮೊಟಕುಗೊಳಿಸಿ ಮಕ್ಕಳನ್ನು ಕಾರ್ಮಿಕರನ್ನಾಗಿ ಮಾಡುವ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು. ಮಕ್ಕಳ ಹಕ್ಕುಗಳ ಉಲ್ಲಂಘನೆ ಕಂಡುಬಂದಲ್ಲಿ ಸಹಾಯವಾಣಿಗೆ ಕರೆ ಮಾಡಬೇಕು. ಈ ಪದ್ಧತಿ ವಿರುದ್ಧ ಆಂದೋಲನದ ರೀತಿ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.
ವಿರಾಜಪೇಟೆ ತಾಲೂಕಿನ ಮಾಯಮುಡಿ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಆರ್.ದಿವಾಕರ್ ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ-1986 ಹಾಗೂ ತಿದ್ದುಪಡಿ-2016 ವಿಷಯ ಕುರಿತು ಉಪನ್ಯಾಸ ನೀಡಿದರು. ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿಗಳು ಶಿವಪ್ಪ ನಾಯಕ ವೃತ್ತದಿಂದ ಡಿವಿಎಸ್ ಶಿಕ್ಷಣ ಸಂಸ್ಥೆಗೆ ಜಾಗೃತಿ ಜಾಥಾ ನಡೆಸಿದರು.
ಡಿವಿಎಸ್ ಕಾರ್ಯದರ್ಶಿ ಎಸ್.ಪಿ.ದಿನೇಶ್, ಪ್ರಾಚಾರ್ಯ ವೆಂಕಟೇಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ ಸ್ವಾಮಿ, ಜಿಲ್ಲಾ ಕಾರ್ಮಿಕ ಅಧಿಕಾರಿ ವೇಣುಗೋಪಾಲ್, ಕಾರ್ಮಿಕ ನಿರೀಕ್ಷಕರಾದ ಸುಖಿತಾ, ಎಂ.ಕೃಷ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್, ರಘುನಾಥ್ ಉಪಸ್ಥಿತರಿದ್ದರು.
ಸಮಾಜಘಾತುಕರಾಗುವ ಅಪಾಯ
ಒಂದೇ ಒಂದು ಮಗು ಕೂಡಾ ಶಿಕ್ಷಣದಿಂದ ವಂಚಿತ ಆಗಬಾರದು. ಶಿಕ್ಷಣದಿಂದ ವಂಚಿತರಾದರೆ ಮಕ್ಕಳು ಸಮಾಜಘಾತುಕ ಚಟುವಟಿಕೆಯಲ್ಲಿ ತೊಡಗುವ ಸಂಭವ ಹೆಚ್ಚಿರುತ್ತದೆ. ಹೀಗಾಗಿ ಶಿಕ್ಷಣ ಕೊಡಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಕಟ್ಟಕಡೆಯ ಮಗುವಿಗೂ ಶಿಕ್ಷಣ ಕೊಡಿಸುವ ವ್ಯವಸ್ಥೆ ನಿರ್ಮಿಸೋಣ ಎಂದು ಡಿವಿಎಸ್ ಅಧ್ಯಕ್ಷ ಕೆ.ಬಸಪ್ಪ ಗೌಡ ಹೇಳಿದರು. ಬಾಲ ಕಾರ್ಮಿಕ ಪದ್ಧತಿ ನಾಗರಿಕ ಸಮಾಜದ ಆರಂಭದಿಂದಲೂ ಇದೆ. ಬಾಲ ಕಾರ್ಮಿಕ ನಿಷೇಧ ಕಾಯ್ದೆ ಜಾರಿಯಾಗಿ 40 ವರ್ಷ ಕಳೆದರೂ ಈ ಪದ್ಧತಿ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ವಲಸೆ ಹೋಗುವ ಕುಟುಂಬಗಳು ಹಾಗೂ ಕೊಳೆಗೇರಿಗಳಲ್ಲಿ ವಾಸಿಸುವ ಜನರ ನಡುವೆ ಬಾಲಕಾರ್ಮಿಕ ಪದ್ಧತಿ ಇನ್ನೂ ಚಾಲ್ತಿಯಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ವ್ಯಸನಿಗಳಾಗುವ ಸಂಭವ
ಶಿಕ್ಷಣ ವಂಚಿತ ಮಕ್ಕಳು ವ್ಯಸನಕ್ಕೊಳಗಾಗುವ ಸಂಭವ ಹೆಚ್ಚಿರುತ್ತದೆ. ಹೀಗೆ ವ್ಯಸನಕ್ಕೊಳಗಾದ ಮಕ್ಕಳು ಅಪರಾಧ ಚಟುವಟಿಕೆಯಲ್ಲೂ ಪಾಲ್ಗೊಳ್ಳುತ್ತಾರೆ. ವ್ಯಸನಕ್ಕೆ ಹಣ ಸಿಗದಿದ್ದಾಗ ಕೆಲಸ ಮಾಡಲು ಮುಂದಾಗುತ್ತಾರೆ. ಇದೆಲ್ಲದಕ್ಕೂ ಪರಿಹಾರವೆಂದರೆ ಶಿಕ್ಷಣ ಮಾತ್ರ. ಹೀಗಾಗಿ ಎಲ್ಲ ಮಕ್ಕಳನ್ನೂ ಕಡ್ಡಾಯವಾಗಿ ಶಾಲೆಗೆ ದಾಖಲಿಸಬೇಕು. ಎಲ್ಲ ಮಕ್ಕಳಿಗೆ ಸುರಕ್ಷಿತ ಮತ್ತು ಆರೋಗ್ಯಕರವಾದ ಸಮಾಜದಲ್ಲಿ ಬದುಕುವ ಹಕ್ಕಿದೆ. ಹೀಗಾಗಿ ಬಾಲ ಕಾರ್ಮಿಕ ವ್ಯವಸ್ಥೆ ತೊಡೆದುಹಾಕುವ ಪ್ರತಿಜ್ಞೆ ಮಾಡಬೇಕು ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ತಾಜುದ್ದೀನ್ ಖಾನ್ ಹೇಳಿದರು.