ಆನಂದಪುರ: ಪಠ್ಯ ಕಲಿಕೆ ಜತೆ ವಿದ್ಯಾರ್ಥಿಗಳು ಕ್ರೀಡೆ ಹಾಗೂ ಸಾಂಸ್ಕೃತಿಕ ಅಭಿರುಚಿಗಳನ್ನು ಬೆಳೆಸಿಕೊಂಡರೆ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿ ಮಗುವಿಗೂ ಶಿಕ್ಷಣ ದೊರೆಯಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಮರಳಿ ಶಾಲೆಗೆ ಕರೆತರುವ ಕೆಲಸ ಆಗಬೇಕು. ಸಾಗರ ತಾಲೂಕಿನಲ್ಲಿ ನಾಲ್ಕು ಕರ್ನಾಟಕ ಪಬ್ಲಿಕ್ ಸ್ಕೂಲ್ ಹಾಗೂ ಮೂರು ನೂತನ ವಸತಿ ಶಾಲೆ ಆರಂಭಿಸಲು ಸರ್ಕಾರ ಅನುದಾನ ಒದಗಿಸಿದೆ ಎಂದರು.
ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ 21ಕ್ಕೂ ಹೆಚ್ಚಿನ ಸ್ಪರ್ಧೆ ಆಯೋಜಿಸಲಾಗಿತ್ತು. ಪ್ರಮುಖವಾಗಿ ಕಲೋತ್ಸವದಲ್ಲಿ ಜಾನಪದ ನೃತ್ಯ, ಭರತನಾಟ್ಯ, ಗಝಲ್ ಗಮನ ಸೆಳೆದವು. ಸಾಗರ ಬಿಇಒ ಸದಾನಂದ ಸ್ವಾಮಿ, ಕೆಪಿಎಸ್ ಪ್ರಾಚಾರ್ಯ ರವಿಶಂಕರ್, ಉಪಪ್ರಾಚಾರ್ಯ ಎಚ್.ಎಂ.ಈಶ್ವರಪ್ಪ, ರಂಗನಾಥ್, ಲಕ್ಷ್ಮಣ್ ಆರ್.ನಾಯ್ಕ, ಬಿ.ಓಂಕಾರಪ್ಪ, ಜಿ.ಮಹಾಬಲೇಶ್ವರ, ಎಸ್.ಆರ್.ಮಂಜಪ್ಪ ಇತರರಿದ್ದರು.