ಬೈಕ್ ಡಿಕ್ಕಿಯಾಗಿ ಮೃತಪಟ್ಟ ಚಿರತೆ.
- ಗುರುವಾರ ಮಧ್ಯಾಹ್ನ ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿ
- ಶಿವಮೊಗ್ಗದಿಂದ ತೀರ್ಥಹಳ್ಳಿಗೆ ತೆರಳುತ್ತಿದ್ದ ಸವಾರ
- ಏಕಾಏಕಿ ರಸ್ತೆ ದಾಟಲು ಮುಂದಾದ ಚಿರತೆ
ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಬಳಿ ಗುರುವಾರ ಮಧ್ಯಾಹ್ನ ರಸ್ತೆ ದಾಟುತ್ತಿದ್ದ ಚಿರತೆ(Leopard)ಗೆ ಬೈಕ್ ಡಿಕ್ಕಿಯಾಗಿದೆ. ಚಿರತೆ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.
ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ಬೈಕ್ ಸವಾರ ಚಲಿಸುತ್ತಿದ್ದಾಗ ಮಂಡಗದ್ದೆ(Mandagadde) ಸಮೀಪದ ಅರಣ್ಯ ಭಾಗದಿಂದ ಚಿರತೆಯು ಏಕಾಏಕಿ ರಸ್ತೆ ದಾಟಲು ಮುಂದಾಗಿದೆ. ಈ ವೇಳೆ ಸವಾರನಿಗೆ ಬೈಕ್ ನಿಯಂತ್ರಿಸಲು ಸಾಧ್ಯವಾಗದೆ ಚಿರತೆಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ.
ಇನ್ನು ಅಪಘಾತದ ರಭಸಕ್ಕೆ ಬೈಕ್ ಸಮೇತ ಕೆಳಗೆ ಬಿದ್ದ ಸವಾರನಿಗೆ ಗಂಭೀರ ಗಾಯಗಳಾಗಿದ್ದು ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆ(Shimogga hospital)ಗೆ ದಾಖಲಿಸಲಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಗಾಜನೂರು ಆರ್‌ಎಫ್‌ಓ ಜೆ.ಆರ್.ವಿನಯ್ ಸೇರಿ ಅರಣ್ಯ ಇಲಾಖೆ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದರು.