ಸಾಗರ ನಗರಸಭೆ ಪ್ರಾಂಗಣದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅಧ್ಯಕ್ಷತೆಯಲ್ಲಿ ಯೋಜನಾ ಪ್ರಾಧಿಕಾರದ ಸಭೆ ನಡೆಯಿತು. ಸೋಮಶೇಖರ, ಮರಿಯಾ ಲೀಮಾ, ನಾಗಪ್ಪ ಇತರರಿದ್ದರು.
ಸಾಗರ: ನಗರ ವ್ಯಾಪ್ತಿಯಲ್ಲಿ ಮನೆ, ಲೇಔಟ್ ನಿರ್ಮಾಣಕ್ಕೆ ಯಾವುದೇ ಸಮಸ್ಯೆ ಇಲ್ಲ. ಕಾನೂನುಬದ್ಧವಾದ ಎಲ್ಲ ಕಡತಗಳಿಗೆ ಪ್ರಾಧಿಕಾರದಿಂದ ಒಪ್ಪಿಗೆ ನೀಡಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಸಾಗರ ನಗರಸಭೆ ಪ್ರಾಂಗಣದಲ್ಲಿ ಬುಧವಾರ ಸಾಗರ ಯೋಜನಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು, ಪ್ರಾಧಿಕಾರದ ಎದುರು ಇರುವ ಎಲ್ಲ ಕಡತಗಳನ್ನು ಪರಿಶೀಲಿಸಿ ಮಂಜೂರಾತಿ ನೀಡಿದೆ. ಬೇರೆ ಬೇರೆ ಕಾರಣಗಳಿಂದಾಗಿ ಪ್ರಾಧಿಕಾರದ ಸಭೆ ಕರೆಯಲು ಸಾಧ್ಯವಾಗಿರಲಿಲ್ಲ. ಇನ್ಮುಂದೆ ಪ್ರತಿ ತಿಂಗಳು ನಡೆಸಲಾಗುತ್ತದೆ. ಸಭೆ ಕರೆಯದಿದ್ದರೂ ಮಂಜೂರಾತಿಗೆ ಯಾವುದೇ ಸಮಸ್ಯೆ ಆಗಲಿಲ್ಲ ಎಂದರು.
18ಕ್ಕೂ ಹೆಚ್ಚು ಲೇಔಟ್ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಕಟ್ಟಡ ನಿರ್ಮಾಣ ಪರವಾನಗಿ ನಿಲ್ಲಿಸಿಲ್ಲ. ಕಾನೂನು ತೊಡಕು ಇದ್ದ ಕೆಲವು ಕಡತಗಳನ್ನು ನಿಲ್ಲಿಸಲಾಗಿದೆ. ಉಳಿದವುಗಳನ್ನು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಇಲಾಖೆಗೆ ಕಳಿಸಲಾಗಿದೆ ಎಂದು ತಿಳಿಸಿದರು.
ಪ್ರಾಧಿಕಾರದ ಮಹಾಯೋಜನೆ ಅನುಷ್ಠಾನಕ್ಕೆ ಸಣ್ಣಪುಟ್ಟ ತೊಡಕುಗಳಿವೆ. ಪ್ರಮುಖವಾಗಿ ಗಡಿ ವ್ಯಾಪ್ತಿಯನ್ನು ವಿಸ್ತರಿಸಲು ಪ್ರಾಧಿಕಾರದ ಸಭೆಯಲ್ಲಿ ನಿರ್ಣಯ ಕೈಗೊಂಡು ಅದನ್ನು ಸರ್ಕಾರಕ್ಕೆ ಕಳಿಸಲಾಗಿದೆ. ವ್ಯಾಪ್ತಿ ವಿಸ್ತಾರವಾದರೆ ಪರಿಣಾಮಕಾರಿಯಾಗಿ ಪ್ರಾಧಿಕಾರದ ಕೆಲಸ ಮಾಡಲು ಸಾಧ್ಯ. ಪ್ರಾಧಿಕಾರಕ್ಕೆ ಪ್ರತ್ಯೇಕ ಕಚೇರಿ, ಸಿಬ್ಬಂದಿ ನೇಮಕಕ್ಕೆ ಅವಕಾಶವಿದೆ. ಶೀಘ್ರವೇ ನೂತನ ಕಚೇರಿ ಸ್ಥಾಪಿಸುತ್ತೇವೆ. ತಾತ್ಕಾಲಿಕವಾಗಿ ನಗರಸಭೆಯಲ್ಲಿ ಕಾರ್ಯನಿರ್ವಹಿಸಲಿದೆ ಎಂದರು
ಪ್ರಾಧಿಕಾರದ ಸದಸ್ಯರಾದ ಸೋಮಶೇಖರ ಲ್ಯಾವಿಗೆರೆ, ಮರಿಯಾ ಲೀಮಾ, ಸುರೇಶ ಬಾಬು, ಪೌರಾಯುಕ್ತ ನಾಗಪ್ಪ, ಪ್ರಾಧಿಕಾರದ ನವೀನ್, ಮುದ್ದುಕೃಷ್ಣ ಇತರರಿದ್ದರು.