ಸಾಗರದಲ್ಲಿ ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ರಾಮಚಂದ್ರ ಮೇಸ್ತಿ, ಗಣಪತಿ ಮಂಡಗಳಲೆ, ಲಲಿತಮ್ಮ, ಸೈಯದ್ ಜಾಕೀರ್ ಇತರರಿದ್ದರು.
ಸಾಗರ: ಕೆಲವೆಡೆ ನಕಲಿ ಕಾರ್ಮಿಕರ ಕಾರ್ಡ್ ಮಾಡಿಕೊಡುತ್ತಿರುವ ಮಾಹಿತಿಯಿದೆ. ಕಾರ್ಡ್ ಮಾಡಿಕೊಡುವವರು ಮತ್ತು ಮಾಡಿಸಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಎಚ್ಚರಿಸಿದರು.
ನಗರದಲ್ಲಿ ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘದಿಂದ ಆಯೋಜಿಸಿದ್ದ ಪದಾಧಿಕಾರಿಗಳ ಪದಗ್ರಹಣ, ಟಿ-ಶರ್ಟ್ ವಿತರಣೆ, ಹಿರಿಯ ಕಾರ್ಮಿಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಕಾರ್ಮಿಕರಿಗೆ ನೀಡುವ ಸೌಲಭ್ಯ ನೈಜ ಕಾರ್ಮಿಕರಿಗೆ ತಲುಪಬೇಕು. ಸಾಗರ ತಾಲೂಕಿನಲ್ಲಿ ಕಾರ್ಮಿಕರನ್ನು ಶೋಷಣೆ ಮಾಡುವ ಅಧಿಕಾರಿಗಳನ್ನು ಸಹಿಸಕೊಳ್ಳಲು ಸಾಧ್ಯವಿಲ್ಲ. ಕಾರ್ಮಿಕರಿಗೆ ಎಂಥದ್ದೇ ಸಮಸ್ಯೆ ಬಂದರೂ ನಮ್ಮ ಗಮನಕ್ಕೆ ತನ್ನಿ. ನನ್ನ ಮನೆಗೆ ಮುಖಂಡರ ಸಹಕಾರ ಇಲ್ಲದೆಯೂ ಭೇಟಿ ಮಾಡಿ ಸಮಸ್ಯೆ ಕುರಿತು ಪರಿಹಾರ ಕಂಡುಕೊಳ್ಳಿ ಎಂದು ತಿಳಿಸಿದರು.
ನಮ್ಮ ಸರ್ಕಾರದಲ್ಲಿ ಕಾರ್ಮಿಕ ಪರವಾದ ಅನೇಕ ಯೋಜನೆಗಳು ಜಾರಿಗೆ ತರಲಾಗಿದೆ. ಸಾಗರ ತಾಲೂಕಿನಲ್ಲಿ 10 ಸಾವಿರಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ನೀವು ಸಂಘಟಿತರಾಗಿ ನಿಮ್ಮ ಹಕ್ಕುಗಳನ್ನು ಪಡೆಯಬೇಕು. ಸರ್ಕಾರ ಕಾರ್ಮಿಕರಿಗೆ ನೀಡುತ್ತಿದ್ದ ವಿಮಾ ಮೊತ್ತವನ್ನು 5ರಿಂದ 8 ಲಕ್ಷ ರೂ.ಗೆ ಏರಿಸಿದೆ. ಕುಟುಂಬದ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ವಿಮೆ ಮಾಡಿಸಿಕೊಳ್ಳಬೇಕು. ನಿಮ್ಮ ಮಕ್ಕಳು ಉನ್ನತ ಸ್ಥಾನಕ್ಕೆ ಹೋಗಬೇಕಾದರೆ ಉತ್ತಮ ಶಿಕ್ಷಣ ಕೊಡಿಸಿ ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ರಾಮಚಂದ್ರ ಮೇಸ್ತಿ, ಗಣಪತಿ ಮಂಡಗಳಲೆ, ಲಲಿತಮ್ಮ, ಸೈಯದ್ ಜಾಕೀರ್, ರಮೇಶ್, ರಾಮಪ್ಪ, ಮೈಲಪ್ಪ, ಕೃಷ್ಣಮೂರ್ತಿ, ಹೊಸಂತೆ ಗಣಪತಿ, ಕೆರೆಯಪ್ಪ, ಅನನ್ಯಾ, ಅಣ್ಣಪ್ಪ ಮೇಸ್ತಿ, ಸತೀಶ್ ಅಂಗಡಿ, ಹರೀಶ್ ಇತರರಿದ್ದರು.