ಸೊರಬ ತಾಲೂಕಿನ ಉದ್ರಿ ಗ್ರಾಮದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಸಮರಂಭದಲ್ಲಿ ಪ್ರಾಚಾರ್ಯ ಎಚ್.ಎಂ.ಚಂದ್ರಕುಮಾರ ಮಾತನಾಡಿದರು. ದೀಪಕ್ ಡೋಂಗ್ರೆ, ಶಿವರಾಜ್, ಉಮೇಶ್, ಮಮತಾ ಇತರರಿದ್ದರು. 
ಶಿವಮೊಗ್ಗ

ಎನ್‌ಎಸ್‌ಎಸ್‌ನಿಂದ ನಾಯಕತ್ವ ಗುಣ ವೃದ್ಧಿ | NSS CAMP

ಶಿವಕುಮಾರ ಎಸ್.ಪಿ.
ಸೊರಬ: ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಸೇವಾ ಭಾವನೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುತ್ತದೆ ಎಂದು ಸೊರಬ ಪಾಲಿಟೆಕ್ನಿಕ್ ಪ್ರಾಚಾರ್ಯ ಎಚ್.ಎಂ.ಚಂದ್ರಕುಮಾರ ತಿಳಿಸಿದರು. 
ತಾಲೂಕಿನ ಉದ್ರಿ ಗ್ರಾಮದಲ್ಲಿ ಗುರುವಾರ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎನ್‌ಎಸ್‌ಎಸ್ ಘಟಕ, ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಸಮಿತಿಯಿಂದ ‘ಯುವಕರಿಗಾಗಿ ನನ್ನ ಭಾರತ: ಯುವಕರಿಗೆ ಡಿಜಿಟಲ್ ಸಾಕ್ಷರತೆ’ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಹೆಚ್ಚು. ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳನ್ನು ಶಿಬಿರದಲ್ಲಿ ತೊಡಗಿಸಿಕೊಂಡು ತಮಗಿರುವ ಇತಿಮಿತಿಯಲ್ಲಿ ಶ್ರಮದಾನ ಮಾಡಲಾಗುತ್ತದೆ. ಇದು ಆ ಗ್ರಾಮದ ಜನತೆಯಲ್ಲಿ ಶ್ರಮದಾನದ ಕಲ್ಪನೆ ಬಲಗೊಳ್ಳಲು ನೆರವಾಗುತ್ತದೆ ಎಂದರು.
ವಿದ್ಯಾರ್ಥಿಗಳಲ್ಲೂ ಕೂಡಾ ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆ, ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಮತ್ತು ಪಾಲಕರ ಜತೆ ತಾಳ್ಮೆ ಹಾಗೂ ಗೌರವದಿಂದ ನಡೆದುಕೊಳ್ಳಬೇಕು. ಭವಿಷ್ಯದ ಇಂಜಿನಿಯರ್‌ಗಳಾದ ತಾವು ಹಳ್ಳಿಯ ಜೀವನದ ಬಗ್ಗೆ ತಿಳಿದುಕೊಳ್ಳಬೇಕು. ನನ್ನಿಂದ ಬೇರೆಯವರಿಗೆ ಉಪಕಾರದ ಅಗತ್ಯವಿದೆ ಎಂಬಂತೆ ಬೆಳೆಯಬೇಕು ಎಂದು ತಿಳಿಸಿದರು.
ಉಪನ್ಯಾಸಕರಾದ ದೀಪಕ್ ಡೋಂಗ್ರೆ, ಶಿವರಾಜ್, ಉಮೇಶ್, ಮಮತಾ, ವೆಂಕಟೇಶ್, ಶೇಖರ್, ರಾಧಿಕಾ ಪ್ರಕಾಶ್, ನೀಲಮ್ಮ, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.