ಆನವಟ್ಟಿಯಲ್ಲಿ ಕಸಾಪದಿಂದ ಆಯೋಜಿಸಿದ್ದ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕೆ.ಪಿ.ರುದ್ರಗೌಡ, ಷಣ್ಮುಖಾಚಾರ್, ಲತಾಶ್ರೀ ಕುಮಾರ್, ಪ್ರಕಾಶ್ ಮಡ್ಳೂರ್, ಕೆ.ಸಿ.ಶಿವಕುಮಾರ್, ಬಸವನಗೌಡ ಇತರರಿದ್ದರು. 
ಶಿವಮೊಗ್ಗ

ಹೆಚ್ಚು ಸಂವಹನದಿಂದ ಭಾಷೆಯ ಉಳಿವು | lecturing on Language

ಶಿವಕುಮಾರ ಎಸ್.ಪಿ.
ಸೊರಬ: ಪ್ರಸ್ತುತ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ವ್ಯವಹಾರ ಜ್ಞಾನಕ್ಕೆ ಇಂಗ್ಲಿಷ್ ಭಾಷೆ ಅಗತ್ಯವಾಗಿದ್ದರೂ ರಾಜ್ಯದೊಳಗೆ ಮಾತೃಭಾಷೆ ಕನ್ನಡವನ್ನು ಮಾತನಾಡುವ ಮೂಲಕ ಉಳಿಸಿ ಬೆಳೆಸಬೇಕು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಪಿ.ರುದ್ರಗೌಡ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೊರಬ ಹಾಗೂ ಆನವಟ್ಟಿ ಘಟಕದಿಂದ ಆನವಟ್ಟಿಯ ಶಿಕ್ಷಕಿ ಲತಾಶ್ರೀ ಕುಮಾರ್ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ದತ್ತಿನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎರಡೂವರೆ ಸಾವಿರ ವರ್ಷಗಳ ಇತಿಹಾಸವುಳ್ಳ ಕನ್ನಡಕ್ಕೆ ಅಪಾಯ ಬಾರದಂತೆ ನಾವೆಲ್ಲರೂ ಎಚ್ಚರವಹಿಸಬೇಕು. ಮಕ್ಕಳಲ್ಲಿ ಮಾತೃಭಾಷೆ ಮೇಲೆ ಅಭಿಮಾನ ಮೂಡುವಂತೆ ಮಾಡಬೇಕು. ಬೆಣ್ಣಿಗೇರಿ ಬಸವನಗೌಡ ಅವರು ಕನ್ನಡ ಸಾಹಿತ್ಯ ಪರಿಷತ್ತಿಗೆ ದತ್ತಿ ನೀಡಿರುವುದು ನಮಗೆಲ್ಲರಿಗೂ ಆದರ್ಶ ಎಂದರು.
ಕೋಟಿಪುರ ಎವರಾನ್ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಎಸ್.ಕಾರ್ತಿಕ್ ಸಾಹುಕಾರ್ ಮಾತನಾಡಿ, ಕಷ್ಟದ ಸಂದರ್ಭದಲ್ಲಿ ಮೌನಕ್ಕೆ ಶರಣಾಗದೆ ಹಾಡು, ಲಾವಣಿ, ಒಗಟುಗಳ ಮೂಲಕ ತನ್ನ ಪ್ರತಿಭಟನೆಯನ್ನು ಹಾಗೂ ಹಾಸ್ಯಪ್ರಜ್ಞೆಯನ್ನು ಮಹಿಳೆ ಜಾನಪದದಲ್ಲಿ ಹೊರಹಾಕಿದ್ದಾಳೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಷಣ್ಮುಖಾಚಾರ್ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿ ಅಭಿವೃದ್ಧಿಗಾಗಿ ದಾನಿಗಳಿಂದ ದೇಣಿಗೆ ಪಡೆದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿ ಸ್ಥಾಪಿಸಲಾಗುತ್ತದೆ. ಈ ಹಣದಲ್ಲಿ ಉಪನ್ಯಾಸ, ವಿವಿಧ ಕನ್ನಡ ಪರವಾದ ಕಾರ್ಯಕ್ರಮ, ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಪ್ರಕಾಶ್ ಮಡ್ಳೂರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಸಿ.ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು. ಆನವಟ್ಟಿ ಘಟಕದ ಕಸಾಪ ಅಧ್ಯಕ್ಷ ಬಸವನಗೌಡ,  ಉಮೇಶ್ ಬಿಚ್ಚುಗತ್ತಿ,   ನಾಗರಾಜ್ ಹುಣವಳ್ಳಿ, ಸಂಪತ್‌ಕುಮಾರ, ಬಸವರಾಜ್ ಹೊಸಕೊಪ್ಪ, ನಾಗರಾಜ್, ಬಸವರಾಜ್ ಇತರರಿದ್ದರು.