ಶಿಕಾರಿಪುರದಲ್ಲಿ ಇತ್ತೀಚೆಗೆ ಬಿತ್ತನೆಯಾಗಿ ಮೊಳಕೆಯೊಡೆದಿರುವ ಮೆಕ್ಕೆಜೋಳ. 
ಶಿವಮೊಗ್ಗ

ಶಿಕಾರಿಪುರದಲ್ಲಿ ಮೆಕ್ಕೆಜೋಳ ಬಿತ್ತನೆಗೆ ನಿರಾಸಕ್ತಿ

ಪ್ರಮುಖ ಮುಖ್ಯಾಂಶಗಳು

  • ಮಳೆ ಸಮಸ್ಯೆಯಿಂದ ಬಿತ್ತನೆಗೆ ಕಡೆಗಣನೆ
  • ತಾಲೂಕಿನಲ್ಲಿ 15 ಸಾವಿರ ಹೆಕ್ಟೇರ್​ನಲ್ಲಿ ಬೆಳೆ
  • ತೋಟಗಳಾಗಿ ಪರಿವರ್ತನೆ ಆಗುತ್ತಿರುವ ಜಮೀನುಗಳು
ಶಿಕಾರಿಪುರ: ತಾಲೂಕಿನಲ್ಲಿ ಈಗಾಗಲೇ ರೈತರು ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿದ್ದು, ಹೊಲ ಹಸನು ಮಾಡುವ ಕಾರ್ಯ ಕೆಲ ಕಡೆಗಳಲ್ಲಿ ಪ್ರಾರಂಭವಾಗಿದೆ. ಕೃಷಿ ಚಟುವಟಿಕೆಗಳು ಆರಂಭಿಸಲು ಇನ್ನೂ ಕೆಲವರು ಮಳೆಗಾಗಿ ಕಾಯುತ್ತಿದ್ದಾರೆ. ಮೆಕ್ಕೆಜೋಳ ಬಿತ್ತನೆಗೆ ರೈತರು ಮೀನಮೇಷ ಎಣಿಸುತ್ತಿದ್ದಾರೆ.
ತಾಳಗುಂದ ಭಾಗದಲ್ಲಿ ಕೆಲ ರೈತರು ನಿರೀಕ್ಷಿತ ಮಳೆ ಪ್ರಮಾಣ ಜಾಸ್ತಿಯಾದರೆ ಮೆಕ್ಕೆಜೋಳ ಬಿತ್ತನೆ ಮತ್ತು ನಂತರ ತೊಂದರೆ ಆಗಬಹುದೆಂದು ಈಗಲೇ ಮೆಕ್ಕೆಜೋಳ ಬಿತ್ತನೆ ಮಾಡಿದ್ದು, ಕೆಲ ಕಡೆ ಈಗಾಗಲೇ ಸಸಿ ಹುಟ್ಟಿದೆ. ಈಗ ಮಳೆ ಬಂದರೂ ಮುಂಜಾಗ್ರತೆಯಿಂದ ಮೊದಲೆ ಬಿತ್ತನೆ ಮಾಡಿದವರಿಗೆ ತೊಂದರೆ ಆಗುವುದಿಲ್ಲ ಎನ್ನುವುದು ರೈತರ ಲೆಕ್ಕಾಚಾರ.
ರೈತರು ಮಳೆ ನಿರೀಕ್ಷೆ ತಿಳಿಯದೇ ಬಹುತೇಕ ಬಿತ್ತನೆಗೆ ಇಳಿಯುವದಿಲ್ಲ. ಹಿಂದೆ ಪೂರ್ವಾಪರ ಯೋಚಿಸದೆ ಬಿತ್ತನೆ ಮಾಡಿದ ಪರಿಣಾಮ ಭಾರಿ ಮಳೆಯಿಂದ ಮೆಕ್ಕೆಜೋಳ ಹಾಳಾಗಿ ರೈತರು ಮತ್ತೆ ಎರಡನೇ ಬಾರಿ ಬಿತ್ತನೆ ಮಾಡುವ ಪರಿಸ್ಥಿತಿ ಉಂಟಾಗಿತ್ತು, ಕಳೆದ ವರ್ಷಕ್ಕಿಂತ ಈ ವರ್ಷ ಮೆಕ್ಕೆಜೋಳ ಬೆಳೆಯುವ ಪ್ರದೇಶ ಸಾಕಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ರೈತರು ಇರುವ ಜಮೀನುಗಳನ್ನು ತೋಟಗಳಾಗಿ ಮಾಡುತ್ತಿರುವುದರಿಂದ ಭತ್ತದಂತೆ ಮೆಕ್ಕೆಜೋಳ ಬೆಳೆಯುವವರ ಸಂಖ್ಯೆಯೂ ಣಿಸಬಹುದು.
ಈಗ ತಾಲೂಕಿನಲ್ಲಿ ಮೆಕ್ಕೆಜೋಳವನ್ನು 15,000 ಹೆಕ್ಟೇರ್​ ಪ್ರದೇಶದಲ್ಲಿ ಮಾತ್ರ ಬೆಳೆಯಲಾಗುತ್ತಿದೆ. ಭತ್ತವನ್ನು 10,000 ಹೆಕ್ಟೇರ್​ನಲ್ಲಿ ಮಾತ್ರ ಬೆಳೆಯಲಾಗುತ್ತಿದೆ. ತಾಳಗುಂದ, ಉಡುಗಣಿ, ಹೊಸೂರು ಹೋಬಳಿಯಲ್ಲಿ ಶೇ. 10ರಷ್ಟು ಬಿತ್ತನೆಯಾಗಿದೆ. ಹಿಂದೆ ಸಾಕಷ್ಟು ರೈತರು ರೋಹಿಣಿ ಮಳೆಗೆ ಮೆಕ್ಕೆಜೋಳ ಬಿತ್ತನೆ ಮಾಡುತ್ತಿದ್ದರು. ಆದರೆ ಇದೀಗ ಮಳೆ ವ್ಯತ್ಯಯದಿಂದ ಬಿತ್ತನೆಗೆ ಚಿಂತಿಸುವಂತಾಗಿದೆ.
ಪ್ರಸ್ತುತ ಮಳೆ ಕೊರತೆ
ಜೂನ್​ ಮೊದಲ ವಾರದಲ್ಲಿ ತಾಳಗುಂದ ಮತ್ತು ಉಡುಗಣಿ ಹೋಬಳಿಗಳಲ್ಲಿ ಅತಿ ಕಡಿಮೆ ಮಳೆಯಾಗಿದೆ. ತಾಳಗುಂದ ಹೋಬಳಿಯಲ್ಲಿ 23 ಮಿ.ಮೀ. ಮಳೆಯಾಗಿದ್ದು, ಶೇ. 86ರಷ್ಟು ಮಳೆ ಕಡಿಮೆಯಾಗಿದೆ. ಉಡುಗಣಿ ಹೋಬಳಿಯಲ್ಲಿ 26 ಮಿ.ಮೀ. ಮಳೆಯಾಗಿದ್ದು, ಶೇ. 76ರಷ್ಟು ಮಳೆ ಕಡಿಮೆಯಾಗಿದೆ. ಹೊಸೂರು ಹೋಬಳಿಯಲ್ಲೂ ಮಳೆ ಕಡಿಮೆಯಾಗಿದೆ.
ಬಿತ್ತನೆ ಬೀಜ ಖರೀದಿ ಗೊಂದಲ
ರೈತರು ಹಿಂದೆ ಕೆಲ ಕಡೆಗಳಲ್ಲಿ ಬಿತ್ತನೆ ಬೀಜ ಖರೀದಿಸಿ ಅವು ಚೆನ್ನಾಗಿ ಬೆಳೆದರೂ, ಕೊನೆಗೆ ಕಾಳು ಕಟ್ಟದೇ ರೈತರಿಗೆ ನಷ್ಟವಾಗಿತ್ತು. ಈ ನಿಟ್ಟಿನಲ್ಲಿ ರೈತರು ಕೂಡ ಕೃಷಿ ಇಲಾಖೆ ಅಧಿಕೃತ ಎಂದು ೂಷಿಸಿದ ಕಡೆ ಖರೀದಿ ಮಾಡುವುದು ಒಳ್ಳೆಯದು. ಸುತ್ತಮುತ್ತ ತಾಲೂಕು ಮತ್ತು ಜಿಲ್ಲೆಗಳಿಂದ ಕಳಪೆ ಬೀಜ ಖರೀದಿಸಿ ರೈತರು ತೊಂದರೆಗೆ ಒಳಗಾದಾಗ ರೈತ ಸಂದ ಪ್ರಮುಖರು ಸ್ಥಳಿಯರು ಸೇರಿ ಸಮಸ್ಯೆ ಬಗೆಹರಿಸಿದ್ದರು.
ಮೊಳಕೆ ಒಡೆಯುವವರೆಗೆ ಬೀಜಗಳಿಗೆ ವ್ಯಾಪಾರಿಗಳು ಗ್ಯಾರಂಟಿ ಕೊಡ್ತಾರೆ. ಆದರೆ ಮುಂದೆ ಮೆಕ್ಕೆಜೋಳ ದೊಡ್ಡದಾದ ಮೇಲೆ ಸರಿಯಾಗಿ ಕಾಳು ಹಿಡಿಯುವುದಿಲ್ಲ. ಇದರಿಂದ ಇಳುವರಿ ಬಹಳ ಕಡಿಮೆಯಾಗಿ ತೊಂದರೆಯಾಗುತ್ತದೆ. ಕೃಷಿ ಅಧಿಕಾರಿಗಳು ರೈತರ ಹಿತ ಕಾಯಬೇಕು.
> ಪುಟ್ಟನಗೌಡ ರೈತಸಂದ ಜಿಲ್ಲಾ ಕಾರ್ಯಾಧ್ಯ
ಸರ್ಕಾರದ ಆದೇಶದನ್ವಯ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆಯಿಂದ ವಿತರಿಸಲಾಗುತ್ತಿದೆ. ಬಿತ್ತನೆ ಬೀಜಗಳನ್ನು ಅಧಿಕೃತ ಮಾರಾಟಗಾರರ ಹತ್ತಿರ ಖರೀದಿಸಬೇಕು. ಅಧಿಕೃತ ವ್ಯಾಪಾರಿಗಳಲ್ಲಿ ಬಿತ್ತನೆ ಬೀಜ ಖರೀದಿಸಿದ್ದರೆ ಬಿಲ್​ ಮತ್ತು ಬೀಜಗಳ ಪ್ಯಾಕೆಟ್​ಗಳನ್ನು ಕಾಯ್ದಿಡಬೇಕು. ಅಧಿಕೃತ ವ್ಯಾಪಾರಿಗಳಿಂದ ತೊಂದರೆಯಾದರೆ ಬಗೆಹರಿಸಬಹುದು.
> ಕಿರಣ್​ಕುಮಾರ್​ ಹರ್ತಿ
ಸಹಾಯಕ ನಿರ್ದೇಶಕ, ಕೃಷಿ ಇಲಾಖೆ