ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ 
ಶಿವಮೊಗ್ಗ

ಸ್ಮಾರ್ಟ್‌ಸಿಟಿಯಲ್ಲಿ ಮೂಲ ಸೌಕರ್ಯ ಕೊರತೆ |SmartCity

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಆಗುತ್ತಿಲ್ಲ ಅಭಿವೃದ್ಧಿ ಕೆಲಸ, ಇಡೀ ನಗರ ಗುಂಡಿಗಳ ಆಗರ
  • ನೂರಾರು ಸಮಸ್ಯೆಗಳಿದ್ದರೂ ಗಮನ ಹರಿಸದ ಉಸ್ತುವಾರಿ ಸಚಿವರು
  • ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಕಿಡಿ
ಶಿವಮೊಗ್ಗ: ರಸ್ತೆ ಸೇರಿ ಮೂಲ ಸೌಕರ್ಯಗಳೊಂದಿಗೆ ಚೆನ್ನಾಗಿದ್ದ ಶಿವಮೊಗ್ಗ ನಗರವನ್ನು ಸ್ಮಾರ್ಟ್‌ಸಿಟಿ(SmartCity)ಹೆಸರಲ್ಲಿ ಗೆಬ್ಬೆದ್ದು ನಾರುವಂತೆ ಮಾಡಲಾಗಿದೆ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಕಿಡಿಕಾರಿದರು.
ನಗರದಲ್ಲಿ ಅಭಿವೃದ್ಧಿ ಕೆಲಸ(Development work)ಗಳು ಆಗುತ್ತಿಲ್ಲ. ಇಡೀ ನಗರದ ರಸ್ತೆಗಳು ಗುಂಡಿಗಳ ಆಗರವಾಗಿವೆ. 24*7 ನೀರು ಸರಬರಾಜು ಕೂಡ ಸರಿಯಾಗಿ ಆಗುತ್ತಿಲ್ಲ. ಯುಜಿಡಿ, ಬೀದಿ ದೀಪಗಳ ಸಮಸ್ಯೆ ಮೀತಿಮೀರಿದೆ. ಮಹಾನಗರ ಪಾಲಿಕೆ ಮೂಲ ಸೌಕರ್ಯ ನೀಡುವಲ್ಲಿ ವಿಫಲವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಸೊರಬದಲ್ಲಿ ಸಚಿವ ಮಧು ಬಂಗಾರಪ್ಪ ಅವರು 700 ಕೋಟಿ ರೂ.ಗಳ ಕಾಮಗಾರಿಗೆ ಚಾಲನೆ ನೀಡಿರುವುದಾಗಿ ಹೇಳಿದ್ದಾರೆ. ಆದರೆ ಶಿವಮೊಗ್ಗ ನಗರದಲ್ಲಿ ಅತ್ಯಂತ ಕಠಿಣ ಪರಿಸ್ಥಿತಿ ಇದ್ದು, ನೂರಾರು ಸಮಸ್ಯೆಗಳಿದ್ದರೂ ಉಸ್ತುವಾರಿ ಸಚಿವರು ಗಮನ ಹರಿಸುತ್ತಿಲ್ಲ. ಜಿಲ್ಲಾಡಳಿತ, ಉಪ ವಿಭಾಗಾಧಿಕಾರಿ ಕಚೇರಿ, ಪಾಲಿಕೆ ಅಧಿಕಾರಿಗಳು ತಮ್ಮ ವೈಯಕ್ತಿಕ ಕಾರಣಕ್ಕಾಗಿ ಮಾತ್ರ ಕಡತಗಳ ವಿಲೇವಾರಿ ಮಾಡುತ್ತಿದ್ದಾರೆ. ನಾಗರಿಕರ ಸಮಸ್ಯೆಗಳನ್ನು ಕಡೆಗಣಿಸಿದ್ದಾರೆ. 24*7 ನೀರಿನ ಯೋಜನೆ ಇದುವರೆಗೂ ಪೂರ್ಣಗೊಂಡಿಲ್ಲ. ಜನರದ್ದೇ ದುಡ್ಡಿನಲ್ಲಿ ಕನೆಕ್ಷನ್ ಕೊಡಿಸಿದ ಅಧಿಕಾರಿಗಳು ಅಗೆದ ಗುಂಡಿಗಳನ್ನೂ ಕೂಡಾಮುಚ್ಚುತ್ತಿಲ್ಲ ಎಂದು ಆರೋಪಿಸಿದರು.
ಜೆಡಿಎಸ್ ಪ್ರಮುಖರಾದ ದೀಪಕ್ ಸಿಂಗ್, ಎಚ್.ಎಂ.ಸಂಗಯ್ಯ, ಶ್ಯಾಮ್, ಗಂಧದಮನೆ ನರಸಿಂಹ, ಬೊಮ್ಮನಕಟ್ಟೆ ಮಂಜುನಾಥ್, ರಮೇಶ್ ನಾಯಕ್, ವಿಜಯಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

ದಂಡ ಸಂಗ್ರಹದಲ್ಲಿ ನಂ.1

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರೌಡಿಸಂ, ಗಾಂಜಾ, ಮಟ್ಕಾ ದಂಧೆ ವ್ಯಾಪಕವಾಗಿದೆ. ಕಡಿವಾಣ ಹಾಕಬೇಕಾದ ಪೊಲೀಸರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ದಂಡ ವಿಧಿಸುವ ಕಾರ್ಯದಲ್ಲಿ ಮುಳುಗಿದ್ದಾರೆ. ಹಾಗಾಗಿ ದಂಡ ಹಾಕುವುದರಲ್ಲಿ ದೇಶಕ್ಕೆ ಕರ್ನಾಟಕ ನಂಬರ್ ಒನ್ ಆಗಿದೆ ಎಂದು ಕೆ.ಬಿ.ಪ್ರಸನ್ನಕುಮಾರ್ ಲೇವಡಿ ಮಾಡಿದರು.
"

ಶಿವಮೊಗ್ಗ ವಿಮಾನ ನಿಲ್ದಾಣ ರಸ್ತೆಯಲ್ಲಿ ರಾತ್ರಿ ಬೀದಿ ದೀಪಗಳು ಉರಿಯುತ್ತಿಲ್ಲ. ಪ್ರಮುಖ ಬಡಾವಣೆಗಳಲ್ಲಿ ಮತ್ತು ಪ್ರಮುಖ ರಸ್ತೆಗಳಲ್ಲಿ ಬೀದಿದೀಪಗಳ ಸಮಸ್ಯೆ ಇದೆ. ದರೋಡೆ, ರಾಬರಿ ಮತ್ತಿತರ ಅನೈತಿಕ ಚಟುವಟಿಕೆಗಳಿಗೆ ದಾರಿಯಾಗುತ್ತಿದೆ.