ಎಂಎಲ್‌ಸಿ ಡಾ. ಧನಂಜಯ ಸರ್ಜಿ 
ಶಿವಮೊಗ್ಗ

ಕೆಪಿಎಸ್‌ಸಿ ಎಂದರೆ ಕ್ಯಾಶ್ ಪೋಸ್ಟ್ ಸೆಟ್ಲಮೆಂಟ್ ಕಾಂಗ್ರೆಸ್ | MLC Dr.Dhananjaya Sarji

ಪ್ರಮುಖ ಮುಖ್ಯಾಂಶಗಳು

  • ಖಾಲಿ ಹುದ್ದೆ ಭರ್ತಿಗೆ ರಾಜ್ಯ ಸರ್ಕಾರ ಗಮನಹರಿಸಲಿ
  • ಕೆಪಿಎಸ್‌ಸಿ ಹಗರಣ ಸೂಕ್ತ ತನಿಖೆ ಮಾಡಲಿ
  • ಎಂಎಲ್‌ಸಿ ಡಾ. ಧನಂಜಯ ಸರ್ಜಿ ಒತ್ತಾಯ
ಶಿವಮೊಗ್ಗ: ಕರ್ನಾಟಕದಲ್ಲಿ ಅಸಮರ್ಥ ಸರ್ಕಾರವಿದ್ದು, ಪಶು ವೈದ್ಯಾಧಿಕಾರಿ ನೇಮಕಾತಿಯಲ್ಲಿ ಶೇ.60ರಷ್ಟು ಹಣದ ಅವ್ಯವಹಾರ ಜಗಜ್ಜಾಹೀರಾಗಿದೆ. ಹಾಗಾಗಿ ಕೆಪಿಎಸ್‌ಸಿ(KPSC

) ಎಂಬುದು ಕ್ಯಾಶ್ ಪೋಸ್ಟ್ ಸೆಟ್ಲಮೆಂಟ್ ಕಾಂಗ್ರೆಸ್ ಎಂಬಂತಾಗಿದೆ ಎಂದು ಎಂಎಲ್‌ಸಿ ಡಾ. ಧನಂಜಯ ಸರ್ಜಿ(MLC Dr. Dhananjaya Sarji) ಟೀಕಿಸಿದರು.

ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಖಾಲಿಯಿರುವ ಎಲ್ಲ ಸರ್ಕಾರಿ ಹುದ್ದೆ ಭರ್ತಿ ಮಾಡುತ್ತೇವೆ ಎಂದಿದ್ದರು. ಆದರೆ ಮೂರೂವರೆ ವರ್ಷ ಕಳೆದರೂ ವಿದ್ಯಾರ್ಥಿಗಳ ಮೂಗಿಗೆ ತುಪ್ಪ ಸವರುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾಡಿದರು.
ಬಿಜೆಪಿ ಸರ್ಕಾರ ಇದ್ದಾಗ 7 ಲಕ್ಷ ಹುದ್ದೆಗಳು ಖಾಲಿ ಇದ್ದವು. ಹುದ್ದೆಗೆ ಅನುಗುಣವಾಗಿ ಜನಸಂಖ್ಯೆಯೂ ಇತ್ತು. ಆದರೆ ಈಗ ಜನಸಂಖ್ಯೆ ಹೆಚ್ಚಾಗಿದೆ. ಆದರೆ ಹುದ್ದೆಗಳು ಮಾತ್ರ ಅಷ್ಟೇ ಇವೆ. ವಿದ್ಯಾರ್ಥಿಗಳು ಬೀದಿಗಿಳಿದಾಗ ಮಾತ್ರ ಕಾಂಗ್ರೆಸ್ ಸರ್ಕಾರ(Congress Government

) ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗುತ್ತದೆ. ಇನ್ನು 7 ಲಕ್ಷ ಹುದ್ದೆಯಲ್ಲಿ ಶೇ.40ರಷ್ಟು ಅಂದರೆ ಇನ್ನೂ 2.94 ಲಕ್ಷ ಹುದ್ದೆ ತುಂಬುವುದು ಬಾಕಿ ಇದೆ ಎಂದರು.

ಪಶು ವೈದ್ಯಾಧಿಕಾರಿ ನೇಮಕಾತಿ(Veterinary Officer Recruitment) ಹಗರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಆದರೆ ಸರ್ಕಾರ ಇದಕ್ಕೆ ಸಂಬಂಧಿಸಿ ಸರಿಯಾಗಿ ತನಿಖೆ ಮಾಡಿಸಿಲ್ಲ. ಕಳೆದ ಬಾರಿ ಗೆಜೆಟೆಡ್ ಪರೀಕ್ಷೆಯಲ್ಲೂ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಈ ವಿಷಯವನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸದನದಲ್ಲಿ ಪ್ರಶ್ನೆ ಕೇಳಿದ್ದೆ. ಆದರೆ ಅಷ್ಟರಲ್ಲಿ ಅವರೇ ಸಿಎಂ ಸ್ಥಾನದಿಂದಲೇ ಕೆಳಗಿಳಿದರು ಎಂದು ಕುಟುಕಿದರು.

ಕಡಿಮೆ ಅವಧಿಯಲ್ಲಿ ಹೆಚ್ಚು ಬಾರಿ ದೆಹಲಿ ಪ್ರವಾಸ !

ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಬಾರಿ ದೆಹಲಿ ಪ್ರವಾಸ ಮಾಡಿದ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಡಿ.ಕೆ.ಶಿವಕುಮಾರ್. ಸಿಎಂ ಆದ ಬಳಿಕ ಸದಾ ದೆಹಲಿ ಪ್ರವಾಸದಲ್ಲೇ ನಿರತರಾಗಿದ್ದಾರೆ. ನೀಟ್ ಪೇಪರ್ ಹಗರಣದಲ್ಲಿ ದೆಹಲಿಗೆ ಹೋಗಿ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಾರೆ. ಆದರೆ ಕೆಪಿಎಸ್‌ಸಿ ಹಗರಣ ಅವರಿಗೆ ಕಾಣಿಸುತ್ತಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವ್ಯಾವ ರಾಜ್ಯದಲ್ಲಿ ಎಷ್ಟು ಪೇಪರ್ ಲೀಕ್‌ಔಟ್ ಆಗಿದೆ ಎಂಬ ಪಟ್ಟಿ ಇದೆ. ಇದುವರೆಗೂ ಇದಕ್ಕೆ ಸಂಬಂಧಿಸಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಎಷ್ಟು ಸಚಿವರು, ಅಧಿಕಾರಿಗಳ ರಾಜೀನಾಮೆ ಕೊಡಿಸಿದ್ದಾರೆ ಎಂದು ಡಾ. ಧನಂಜಯ ಸರ್ಜಿ ಪ್ರಶ್ನಿಸಿದರು. ಇನ್ನಾದರೂ ಪರೀಕ್ಷೆಯಲ್ಲಿ ಯಾವುದೇ ಲೋಪವಾಗದಂತೆ ನಡೆಸಲಿ ಎಂದರು.

ಗೃಹ ಸಚಿವರ ಕುಮ್ಮಕ್ಕು 

ಪೊಲೀಸ್ ಪೇದೆ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ. ಪ್ರತಿಪಕ್ಷದವರು ರಾಜೀನಾಮೆ ಕೇಳಿದರೆ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ  20 ದಿನ ಉಪವಾಸ ಕೂರಲಿ, ಲಾಠಿ ಚಾರ್ಜ್ ಆದ ನಂತರ ರಾಜೀನಾಮೆ ಕೊಡೋಣ ಎಂಬ ಮಂಡತನ ಪ್ರದರ್ಶಿಸುತ್ತಾರೆ. ರಾಜ್ಯದಲ್ಲಿ 249 ನಕಲಿ ಪಿಎಚ್‌ಡಿ ಬೆಳಕಿಗೆ ಬಂದಿದ್ದು, ಅದರಲ್ಲಿ 153 ನಕಲಿ ಪಿಎಚ್‌ಡಿ ಅಭ್ಯರ್ಥಿಗಳು ಕಲಬುರ್ಗಿಯಲ್ಲೆ ಇದ್ದಾರೆ. ಇಂತಹ ಅಕ್ರಮಕ್ಕೆ ಈ ಗೃಹ ಸಚಿವರೇ ಕುಮ್ಮಕ್ಕು ಕೊಡುತ್ತಿದ್ದಾರೆ ಎಂಬ ಸಂಶಯ ಇದೆ ಎಂದು ಡಾ. ಧನಂಜಯ ಸರ್ಜಿ ಟೀಕಿಸಿದರು. ಬಿಜೆಪಿ ಯುವ ಮೋರ್ಚಾ ಪ್ರಶಾಂತ್ ಕುಕ್ಕೆ, ದರ್ಶನ್, ಅರುಣ್ ಕುಗ್ವೆ, ಮಧುಕರ್, ಮಂಜುನಾಥ, ಚಂದ್ರಶೇಖರ್, ಶರತ್ ಕಲ್ಯಾಣಿ ಸುದ್ದಿಗೋಷ್ಠಿಯಲ್ಲಿದ್ದರು.