ಜೋಗದಲ್ಲಿ ಕೆಪಿಸಿಯಿಂದ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆಯನ್ನು ಮುಖ್ಯ ಅಭಿಯಂತ ಬಿ.ಆನಂದಕುಮಾರ್ ಮತ್ತಿತರರು ಉದ್ಘಾಟಿಸಿದರು. ಕೆ.ವೀರೇಂದ್ರ, ಡಾ. ರತ್ನಾಕರ, ಎಂ.ಮಾದೇಶ್, ಟಿ.ಕೆ.ವಾಸುದೇವಮೂರ್ತಿ ಇತರರಿದ್ದರು.
ಕಾರ್ಗಲ್: ಅಗತ್ಯವಾಗಿ ಬೇಕಾದ ಅತ್ಯಂತ ಅಮೂಲ್ಯ ಇಂಧನವಾದ ವಿದ್ಯುತ್ ಉತ್ಪಾದಿಸಿ ನಾಡಿಗೆ ನೀಡುತ್ತಿರುವ ಕಾರ್ಮಿಕರ ಶ್ರಮ ಶ್ಲಾಘನೀಯ ಎಂದು ಕೆಪಿಸಿ ಶರಾವತಿ ಯೋಜನಾ ಪ್ರದೇಶದ ವಿದ್ಯುತ್ ವಿಭಾಗದ ಮುಖ್ಯ ಅಭಿಯಂತ ಬಿ.ಆನಂದಕುಮಾರ್ ಹೇಳಿದರು.
ಜೋಗದ ಶ್ರೀ ಮಹಾಗಣಪತಿ ಸಮುದಾಯದ ಭವನದಲ್ಲಿ ಕರ್ನಾಟಕ ವಿದ್ಯುತ್ ನಿಗಮದ ಶರಾವತಿ ಯೋಜನಾ ಪ್ರದೇಶದ ಜೋಗ, ಎಂಜಿಎಚ್‌ಇ, ಕಾರ್ಗಲ್ ಹಾಗೂ ಲಿಂಗನಮಕ್ಕಿ ವತಿಯಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು.
ಸಾಕಷ್ಟು ಸವಾಲುಗಳ ನಡುವೆ ತಮ್ಮನ್ನು ತಾವು ತೊಡಗಿಸಿಕೊಂಡು ರಾಜ್ಯಕ್ಕೆ ಬೆಳಕು ನೀಡಲು ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಶ್ರಮ ಅನನ್ಯ ಎಂದರು.
ಕೆಪಿಸಿ ಆಡಳಿತ ಮಂಡಳಿ ನಿರ್ದೇಶಕ ಕೆ.ವೀರೇಂದ್ರ ಮಾತನಾಡಿ, ಬೆಟ್ಟ, ಗುಡ್ಡ, ಕಾಡು, ಕಣಿವೆ ಪ್ರದೇಶಗಳಂತಹ ಜನವಸತಿ ಪ್ರದೇಶಗಳಿಂದ ದೂರವಿದ್ದು ಕೆಪಿಸಿ ಸಂಸ್ಥೆಯನ್ನು ನಮ್ಮ ಕಾರ್ಮಿಕರು ಕಟ್ಟಿದ್ದಾರೆ. ಕನಿಷ್ಠ ಮೂಲ ಸೌಲಭ್ಯಗಳು ಇಲ್ಲದ ಅಂದಿನ ಕಾಲದಲ್ಲಿ ಅತ್ಯಂತ ಶ್ರಮಪಟ್ಟು ಹಗಲು, ರಾತ್ರಿ ಎನ್ನದೆ ದುಡಿದ ಪರಿಣಾಮವಾಗಿ ನಿಗಮ ಇಂದು ಇಷ್ಟು ಎತ್ತರಕ್ಕೆ ಬೆಳೆದಿದೆ ಎಂದು ತಿಳಿಸಿದರು.
ಈ ವರ್ಷ ನಿಗಮವು 38041 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಜತೆಗೆ ನಿಗಮ 14 ಸಾವಿರ ಕೋಟಿ ರೂ. ವಾರ್ಷಿಕ ವಹಿವಾಟು ನಡೆಸುತ್ತಿದೆ. ಈ ಎಲ್ಲದರ ಹಿಂದೆ ನಿಗಮದ ಎಲ್ಲ ಇಂಜಿನಿಯರ್‌ಗಳು ಹಾಗೂ ಕಾರ್ಮಿಕರ ಕೊಡುಗೆ ಇದೆ ಎಂದು ಹೇಳಿದರು.
ಸಾಗರ ಇಂದಿರಾ ಗಾಂಧಿ ಸರ್ಕಾರಿ ಮಹಿಳಾ ಕಾಲೇಜು ಪ್ರಾಧ್ಯಾಪಕ ಡಾ. ರತ್ನಾಕರ ಸಿ. ಕುನುಗೋಡು ಉಪನ್ಯಾಸ ನೀಡಿದರು. ಕೆಪಿಸಿ ಕಾಮಗಾರಿ ವಿಭಾಗದ ಮುಖ್ಯ ಅಭಿಯಂತ ಎಂ.ಮಾದೇಶ್, ಅಧೀಕ್ಷಕ ಅಭಿಯಂತ ಟಿ.ಕೆ.ವಾಸುದೇವಮೂರ್ತಿ, ರಂಗನಾಥ್, ಆರ್.ಶಿವಕುಮಾರ್, ಉಪ ಪ್ರಧಾನ ಪ್ರಬಂಧಕ ರಾಜು, ಜೋಗ ಎಂಪ್ಲಾಯೀಸ್ ಯೂನಿಯನ್ ಚೇರ್ಮನ್ ಮಹಮದ್ ಸದ್ದೂರ್, ಎಸ್ಸಿ-ಎಸ್ಟಿ ಅಸೋಸಿಯೇಶನ್ ಕೇಂದ್ರ ಸಮಿತಿ ಕಾರ್ಯದರ್ಶಿ ಮಿರ್ಜಾ ಕುಮಾರ್ ಇತರರಿದ್ದರು.