ಶಿವಮೊಗ್ಗ ವಿನೋಬನಗರದಲ್ಲಿ ಹಿರಿಯ ಸಮಾಜವಾದಿ ಕೋಣಂದೂರು ಲಿಂಗಪ್ಪ ಅವರಿಗೆ ಕುವೆಂಪು ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಮಧು ಬಂಗಾರಪ್ಪ, ಪ್ರೊ. ಶರತ್ ಅನಂತಮೂರ್ತಿ, ಎನ್.ಹೇಮಂತ್, ಕೆ.ಪಿ.ಶ್ರೀಪಾಲ್, ರಾಘವೇಂದ್ರಸ್ವಾಮಿ ಇದ್ದರು.
- ಹಿರಿಯ ಸಮಾಜವಾದಿ ನಾಯಕನಿಗೆ ಒಲಿದ ಕುವೆಂಪು ವಿವಿ ಗೌರವ ಡಾಕ್ಟರೇಟ್
- ನಿವಾಸಕ್ಕೆ ತೆರಳಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ
- ಕೋಣಂದೂರು ಲಿಂಗಪ್ಪ ಅವರೊಂದಿಗೆ ಕುಶಲೋಪರಿ ನಡೆಸಿದ ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ: ಹಿರಿಯ ಸಮಾಜವಾದಿ ನಾಯಕ, ಸ್ವಾತಂತ್ರೃ ಹೋರಾಟಗಾರ ಕೋಣಂದೂರು ಲಿಂಗಪ್ಪ ಅವರಿಗೆ ಶುಕ್ರವಾರ ವಿನೋಬನಗರದ ಅವರ ನಿವಾಸದಲ್ಲಿ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್(Honorary Doctorate) ಪ್ರದಾನ ಮಾಡಲಾಯಿತು.
ಅನಾರೋಗ್ಯದ ಹಿನ್ನೆಲೆಯಲ್ಲಿ ಬುಧವಾರ ನಡೆದ ಕುವೆಂಪು ವಿವಿ(Kuvempu vv)ಯ 35ನೇ ಘಟಿಕೋತ್ಸವಕ್ಕೆ ಕೋಣಂದೂರು ಲಿಂಗಪ್ಪ ಗೈರಾಗಿದ್ದರು. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಶುಕ್ರವಾರ ಅವರ ನಿವಾಸಕ್ಕೆ ತೆರಳಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಅಭಿನಂದಿಸಿದರು.
ಇದೇ ವೇಳೆ ಲಿಂಗಪ್ಪ ಅವರೊಂದಿಗೆ ಕುಶಲೋಪರಿ ನಡೆಸಿದ ಸಚಿವ ಮಧು ಬಂಗಾರಪ್ಪ(Madhu bangarappa), ನಿಮ್ಮನ್ನು ಭೇಟಿ ಮಾಡಿ ಮಾತನಾಡುತ್ತಿರುವುದು ನಮ್ಮ ಪುಣ್ಯ ಎಂದರು. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ರಾಜಕೀಯ ಜೀವನದ ಘಟನೆಯನ್ನು ಸ್ಮರಿಸಿದರು.
ಎಸ್.ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಕುವೆಂಪು(Kuvempu) ಅವರನ್ನು ಭೇಟಿಯಾಗಿದ್ದರು. ಆ ವೇಳೆ ಕುವೆಂಪು ಅವರು ಕುಪ್ಪಳಿಯ ತಮ್ಮ ಮನೆ ನೋಡಬೇಕೆಂಬ ಇಂಗಿತ ವ್ಯಕ್ತಪಡಿಸಿದಾಗ ಬಂಗಾರಪ್ಪ ಅವರು ಖುದ್ದಾಗಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿ ಅಂದಿನ ಸಚಿವರಾಗಿದ್ದ ಮಲ್ಲಿಕಾರ್ಜುನಯ್ಯ ಹಾಗೂ ವೈದ್ಯರ ತಂಡದೊಂದಿಗೆ ಕುವೆಂಪು ಅವರಿಗೆ ಮನೆ ತೋರಿಸಲು ಗೌರವದಿಂದ ಕರೆತಂದಿದ್ದರು ಎಂಬುದನ್ನು ಮಧು ಬಂಗಾರಪ್ಪ ನೆನಪಿಸಿಕೊಂಡರು.
ಇದೇ ವೇಳೆ ಶಿಕ್ಷಣ ವ್ಯವಸ್ಥೆ ಬಗ್ಗೆ ಕೋಣಂದೂರು ಲಿಂಗಪ್ಪ(Konandur lingappa) ವಿಚಾರಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 94.10ರಷ್ಟು ಫಲಿತಾಂಶ ಪಡೆಯುವ ಮೂಲಕ ಈ ಬಾರಿ ಐತಿಹಾಸಿಕ ಸಾಧನೆ ದಾಖಲಾಗಿದೆ. ಹಿಂದೆ ಈ ಪ್ರಮಾಣವು ಶೇ.70ರಿಂದ 80ರಷ್ಟಿತ್ತು. ಪೂರಕ ಪರೀಕ್ಷೆಯ ಬದಲಾಗಿ ವರ್ಷಕ್ಕೆ ಮೂರು ಪರೀಕ್ಷೆಗಳನ್ನು ನಡೆಸುವ ಸರ್ಕಾರದ ಹೊಸ ನೀತಿಯು ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಪರೀಕ್ಷೆ ಮುಗಿದ 20 ದಿನಗಳಲ್ಲೇ ಮತ್ತೊಂದು ಅವಕಾಶ ನೀಡುವುದರಿಂದ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿದೆ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಮೂಲಕ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವುದೇ ನಮ್ಮ ಸರ್ಕಾರದ ಗುರಿ ಎಂದು ಹೇಳಿದರು.
ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಕುಲಸಚಿವರಾದ ಎನ್.ಹೇಮಂತ್, ಸಿಂಡಿಕೇಟ್ ಸದಸ್ಯ ಕೆ.ಪಿ.ಶ್ರೀಪಾಲ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ ಮತ್ತಿತರರಿದ್ದರು.