ಭಂಡಾರಹಳ್ಳಿಯ ಹಳ್ಳದ ನೀರಿನಿಂದ ಆರೋಪಿಯನ್ನು ವಶಕ್ಕೆ ಪಡೆದ ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರು.
- ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿ
- ಪೊಲೀಸರ ನೋಡಿ ಹಳ್ಳದಲ್ಲಿ ನೀರಿನಲ್ಲಿ ಅಡಗಿ ತಪ್ಪಿಸಿಕೊಳ್ಳಲು ಯತ್ನ
- ಮಹಾಭಾರತದಲ್ಲಿ ದುರ್ಯೋಧನನ ಪ್ರಸಂಗ ನೆನಪಿಸಿದ ಘಟನೆ
ಶಿವಮೊಗ್ಗ: ನ್ಯಾಯಾಲಯದ ವಿಚಾರಣೆ(Court hearing)ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬ ಹಳ್ಳದ ನೀರಿನಲ್ಲಿ ಮುಳುಗಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ.
ಭದ್ರಾವತಿ ನಿವಾಸಿ ದಿಲೀಪ್ ಅಲಿಯಾಸ್ ಕರಿಯ ಬಂಧಿತ ಆರೋಪಿ. ಕಳ್ಳತನ, ಕೊಲೆ ಯತ್ನ ಸೇರಿ ಈತನ ವಿರುದ್ಧ 16 ಪ್ರಕರಣಗಳಿದ್ದು, ಒಂದು ಪ್ರಕರಣದಲ್ಲಿ ಭದ್ರಾವತಿ ನ್ಯಾಯಾಲಯದಿಂದ ಮೂರು ಬಾರಿ ಜಾಮೀನು ರಹಿತ ವಾರಂಟ್ ಜಾರಿ(Warrant issued)ಯಾಗಿತ್ತು. ಆದರೂ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ನ್ಯಾಯಾಲಯದ ವಿಚಾರಣೆಗೆ ನಿರಂತರವಾಗಿ ಗೈರುಹಾಜರಾಗುತ್ತಿದ್ದ ದಿಲೀಪ್ ಪೊಲೀಸರ ಕೈಗೂ ಸಿಗದೆ ಓಡಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಆತನ ಪತ್ತೆಗೆ ಭದ್ರಾವತಿ ನ್ಯೂಟೌನ್ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರನ್ನು ನೋಡಿದ ದಿಲೀಪ್ ಭಂಡಾರಹಳ್ಳಿ(Bhandarahalli) ಸಮೀಪದ ಹಳ್ಳದಲ್ಲಿ ನೀರಿನಲ್ಲಿ ಅಡಗಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದ.
ಈ ವೇಳೆ ನ್ಯೂಟೌನ್ ಠಾಣೆ(Newtown Station) ಪಿಎಸ್‌ಐ ರಮೇಶ್, ಸಿಬ್ಬಂದಿಗಳಾದ ಪ್ರಸನ್ನ, ಗಂಗಾಧರ ಹಾಗೂ ಹಾಲಪ್ಪ ನೀರಿಗೆ ಧುಮುಕಿ ದಿಲೀಪ್‌ನನ್ನು ವಶಕ್ಕೆ ಪಡೆದಿದ್ದಾರೆ. ಹಳ್ಳದ ನೀರಿನಲ್ಲಿ ಅಡಗಿಕೊಂಡಿದ್ದ ದಿಲೀಪ್‌ನನ್ನು ಪೊಲೀಸರು ಪತ್ತೆ ಹಚ್ಚಿದ ರೀತಿಯು ಮಹಾಭಾರತದಲ್ಲಿ ಪಾಂಡವರಿಂದ ತಪ್ಪಿಸಿಕೊಳ್ಳಲು ಸರೋವರದಲ್ಲಿ ಅಡಗಿಕೊಂಡಿದ್ದ ದುರ್ಯೋಧನನ ಪ್ರಸಂಗವನ್ನು ನೆನಪಿಸುವಂತಿತ್ತು.