ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ಕೆಂಪೇಗೌಡ ಅವರ ಜನ್ಮದಿನಾಚರಣೆಯನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿದರು. ರತ್ನಾಕರ ಶೆಟ್ಟಿ, ಎಸ್.ರಂಜಿತ್, ಕೃಷ್ಣಮೂರ್ತಿ ಇತರರಿದ್ದರು.
ತೀರ್ಥಹಳ್ಳಿ: ತಾಂತ್ರಿಕತೆಯಲ್ಲಿ ಜಗತ್ತಿನ ಅತ್ಯಂತ ಪ್ರಮುಖ ನಗರಗಳಲ್ಲಿ ಒಂದಾಗಿರುವ ಬೆಂಗಳೂರನ್ನು ಸ್ಥಾಪಿಸಿದ ದಕ್ಷ ಆಡಳಿತಗಾರರಾಗಿದ್ದ ನಾಡಪ್ರಭು ಕೆಂಪೇಗೌಡ ಅವರ ದೂರದರ್ಶಿ ಚಿಂತನೆ ಅನುಕರಣೀಯ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಬುಧವಾರ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಐದು ಶತಮಾನಗಳ ಹಿಂದೆಯೇ ಯೋಜನಾಬದ್ಧ, ವೈಜ್ಞಾನಿಕವಾಗಿ ನಗರವನ್ನು ರೂಪಿಸಿದ ಕೆಂಪೇಗೌಡರ ದೂರದರ್ಶಿತ್ವ ಸ್ಮರಣೀಯ. ಐಟಿಬಿಟಿಯಲ್ಲಿ ವಿಶ್ವಮಾನ್ಯತೆ ಗಳಿಸಿರುವ ಬೆಂಗಳೂರು ವ್ಯಾಪಾರ, ವಾಣಿಜ್ಯ ಮತ್ತು ಸಾಂಸ್ಕೃತಿಕವಾಗಿಯೂ ಶ್ರೀಮಂತವಾಗಿದೆ. ಕನ್ನಡಿಗರ ಅಭಿಮಾನದ ರಾಜಧಾನಿಯೂ ಆಗಿದೆ. ಹೀಗಾಗಿ ಬೆಂಗಳೂರನ್ನು ಇಡೀ ಜಗತ್ತೇ ತಿರುಗಿ ನೋಡುವಂತಾಗಿದೆ ಎಂದರು.
ತರಬೇತುದಾರ ಸ್ವಾಮಿ ಮಾಸ್ಟರ್ ಮಾತನಾಡಿ, ತರ್ಕಶಾಸ್ತ್ರ ನ್ಯಾಯಶಾಸ್ತ್ರದಲ್ಲಿ ಪರಿಣಿತರಾಗಿದ್ದ ಕೆಂಪೇಗೌಡರು ತಮ್ಮ ಆಡಳಿತದಲ್ಲಿ ಕೋಟೆ, ಪೇಟೆ, ಗುಡಿಗೋಪುರಗಳು, ನೀರು ಮತ್ತು ಉದ್ಯಾನಗಳು ಹೀಗೆ 5 ವಿಚಾರಗಳಿಗೆ ಆದ್ಯತೆ ನೀಡಿದ್ದರು. ವಾಣಿಜ್ಯ ವ್ಯವಹಾರಗಳಿಗೆ ಒತ್ತು ನೀಡುವ ಸಲುವಾಗಿ ವಿವಿದ ವೃತ್ತಿ ಆಧಾರಿತ ಸಮುದಾಯಗಳಿಗೆ ಪೂರಕವಾಗಿ ಉಪ್ಪರಾಪೇಟೆ, ತರಗು ಪೇಟೆ ಮುಂತಾಗಿ 64 ಪೇಟೆಗಳನ್ನು ಸ್ಥಾಪಿಸಿದ ಪರಿಣಾಮವಾಗಿ ಬೆಂಗಳೂರು ಇಂದು ದೇಶದ ಒಂದು ಬೃಹತ್ ವಾಣಿಜ್ಯ ನಗರಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ ಮಾತನಾಡಿ, ದಾರ್ಶನಿಕರು, ಸಾಧಕರು ಮುಂತಾದ ಸರ್ಕಾರಿ ನಿರ್ದೇಶಿತ ಇಂತಹ ಕಾರ್ಯಕ್ರಮಗಳು ಕೇವಲ ಔಪಚಾರಿಕವಾಗಿ ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ತಹಸಿಲ್ದಾರ್ ಎಸ್.ರಂಜಿತ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕೂಳೂರು ಕೃಷ್ಣಮೂರ್ತಿ, ಬಿಇಒ ಮಂಜುನಾಥ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಘವೇಂದ್ರ, ಸುರಥಕುಮಾರ್ ಇತರರಿದ್ದರು.