ಕಸ್ತೂರಿ ರಂಗನ್ ವರದಿ ತಿರಸ್ಕರಿಸುವಂತೆ ಒತ್ತಾಯಿಸಿ ಸಾಗರದಲ್ಲಿ ರೈತ ಸಂಘದ ಪ್ರಮುಖರು ಎಸಿ ವೀರೇಶ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಶಿವಾನಂದ ಕುಗ್ವೆ, ಎನ್.ಡಿ.ವಸಂತಕುಮಾರ್, ಜಿನೇಶ್‌ಕುಮಾರ್, ಹೊಯ್ಸಳ ಗಣಪತಿಯಪ್ಪ ಇತರರಿದ್ದರು. 
ಶಿವಮೊಗ್ಗ

ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕ | Protest by farmers

ಶಿವಕುಮಾರ ಎಸ್.ಪಿ.
ಸಾಗರ: ಕಸ್ತೂರಿ ರಂಗನ್ ವರದಿ ತಿರಸ್ಕರಿಸಬೇಕು, ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಶೂಟೌಟ್ ಪ್ರಕರಣದ ಮೃತರ ಕುಟುಂಬಗಳಿಗೆ ಅತಿಹೆಚ್ಚು ಪರಿಹಾರ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಸಾಗರ ತಾಲೂಕು ಸಂಯುಕ್ತ ರೈತ ಸಂಘದ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ವೀರೇಶ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಕಸ್ತೂರಿ ರಂಗನ್ ವರದಿಯಂತೆ ಜಿಲ್ಲೆಯ 446 ಜನವಸತಿಯುಳ್ಳ ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಸೇರಿಸಿರುವುದು ಅವೈಜ್ಞಾನಿಕ. ಉತ್ತರ ಕನ್ನಡ ಜಿಲ್ಲೆ ಮತ್ತು ಶಿವಮೊಗ್ಗದ ಮಲೆನಾಡು ಭಾಗದ ಗ್ರಾಮೀಣರಲ್ಲಿ ಆತಂಕ ಮನೆಮಾಡಿದೆ. ಕೃಷಿಯನ್ನೇ ನಂಬಿಕೊಂಡು ಲಾಗಾಯ್ತಿನಿಂದ ಬದುಕುತ್ತಿರುವ ರೈತರು ವರದಿ ಜಾರಿಯಾದರೆ ಒಕ್ಕಲೇಳಬೇಕಾಗುತ್ತದೆ. ಸರ್ಕಾರ ತಕ್ಷಣ ವರದಿ ತಿರಸ್ಕರಿಸುವ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹನೂರು ತಾಲೂಕಿನ ಅರಣ್ಯದಲ್ಲಿ ಶೂಟೌಟ್ ಅತ್ಯಂತ ಅಮಾನವೀಯ ಕೃತ್ಯ. ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ನಡೆಸಿರುವ ಕೃತ್ಯದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಎನ್‌ಕೌಂಟರ್‌ನಲ್ಲಿ ಮೃತಪಟ್ಟ ರೈತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ, ಪ್ರಧಾನ ಕಾರ್ಯದರ್ಶಿ ಎನ್.ಡಿ.ವಸಂತಕುಮಾರ್, ಸಂಯುಕ್ತ ರೈತ ಸಂಘದ ಗೌರವಾಧ್ಯಕ್ಷ ಜಿನೇಶ್‌ಕುಮಾರ್, ಅಧ್ಯಕ್ಷರಾದ ಹೊಯ್ಸಳ ಗಣಪತಿಯಪ್ಪ, ಎಂ.ಬಿ.ಮಂಜಪ್ಪ, ಸುಂದರ ಸಿಂಗ್, ಪ್ರಮುಖರಾದ ರಾಮಪ್ಪ, ಎಚ್.ಬಿ.ರಾಘವೇಂದ್ರ, ಮಂಜು ವಡ್ನಾಲ, ದೇವು ಆಲಳ್ಳಿ, ರಮೇಶ್, ಬೇಬಿ, ಸತೀಶ್ ಅಂಗಡಿ ಇತರರಿದ್ದರು.