ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಶಂಕರನಾರಾಯಣ ಶಾಸ್ತ್ರಿ,
- 12 ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ
- ವಿವಿಧ ಜಿಲ್ಲೆಗಳ ಸಾಹಿತಿಗಳು ಉಪಸ್ಥಿತಿ
- ಪ್ರಶಸ್ತಿ ವಿಜೇತರೊಂದಿಗೆ ಸಂವಾದ ನಡೆಯಲಿದೆ
ಶಿವಮೊಗ್ಗ: ಕರ್ನಾಟಕ ಸಂಘದಿಂದ 12 ವಿವಿಧ ಸಾಹಿತ್ಯ (sahitya) ಪ್ರಕಾರಗಳಿಗೆ ವಿವಿಧ ಶ್ರೇಷ್ಠ ಸಾಹಿತಿಗಳ ಹೆಸರಿನಲ್ಲಿ ನೀಡಲಾಗುವ 2024ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಸಮಾರಂಭವನ್ನು ನ.22ರ ಸಂಜೆ 5.30ಕ್ಕೆ ಆಯೋಜಿಸಲಾಗಿದೆ. ಬಹುಮಾನವು 10 ಸಾವಿರ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.
ನಟ, ನಿರ್ದೇಶಕ ಎಸ್.ಎನ್.ಸೇತುರಾಮ್ (sethuram) ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಮಾರಂಭಕ್ಕೂ ಮೊದಲು ಮಧ್ಯಾಹ್ನ 3ಕ್ಕೆ ಪ್ರಶಸ್ತಿ ಪುರಸ್ಕೃತ ಸಾಹಿತಿಗಳೊಂದಿಗೆ ಸಂವಾದ ಏರ್ಪಡಿಸಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
1994ರಿಂದಲೂ ಕರ್ನಾಟಕ ಸಂಘ (karntakasangha) ದಿಂದ ಪುಸ್ತಕ ಬಹುಮಾನ ನೀಡಲಾಗುತ್ತಿದೆ. ಸಾಹಿತ್ಯದ 12 ಪ್ರಕಾರಗಳಲ್ಲಿ ಏಕಕಾಲಕ್ಕೆ ಪ್ರತಿವರ್ಷ ಬಹುಮಾನ ನೀಡುತ್ತಿರುವ ಕರ್ನಾಟಕದ ಏಕೈಕ ಸಂಸ್ಥೆ ನಮ್ಮದು. ಇಲ್ಲಿ ಪಡೆಯುವ ಪುರಸ್ಕಾರಕ್ಕೆ ಹೆಚ್ಚು ಮೌಲ್ಯವಿದೆ ಎಂದರು.
ಕರ್ನಾಟಕ ಸಂಘದ 95ನೇ ವಾರ್ಷಿಕೋತ್ಸವವನ್ನು ನ.23ರ ಸಂಜೆ 5.30ಕ್ಕೆ ಏರ್ಪಡಿಸಲಾಗಿದೆ. ನಟ ಡಾ. ಶ್ರೀಧರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಂಘದ ಹಿರಿಯ ಸದಸ್ಯರಾದ ಎ.ಜೆ.ರಾಮಚಂದ್ರ, ಎಸ್.ನಾಗರಾಜ್, ಎ.ಎಸ್.ಕೃಷ್ಣಮೂರ್ತಿ, ಎಚ್.ಜಿ.ನಾಗರಾಜ್, ಎಚ್.ಎನ್.ಶ್ರೀನಿವಾಸಮೂರ್ತಿ, ಸ.ಉಷಾ, ಅರುಣ್ ಅವರನ್ನು ಸನ್ಮಾನಿಸಲಾಗುತ್ತದೆ. ಪುಸ್ತಕ ಬಹುಮಾನ ಪ್ರದಾನ ಹಾಗೂ ವಾರ್ಷಿಕೋತ್ಸವ ಸಂದರ್ಭದಲ್ಲಿ ಎರಡೂ ದಿನ ವಿ.ಕೆ.ಜೈನ್ ಅವರಿಂದ ನಾಣ್ಯ ಹಾಗೂ ವೈದ್ಯರಾದ ರತ್ನಾಕರ್, ಪಿ.ಕೆ.ಪೈ ಅವರಿಂದ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕರ್ನಾಟಕ ಸಂಘದ ಕಾರ್ಯದರ್ಶಿ ವಿನಯ್ ಶಿವಮೊಗ್ಗ, ಪ್ರಮುಖರಾದ ಡಾ. ಗುರುದತ್ತ, ಚೇತನ್, ವಾಗೀಶ್, ಪ್ರೊ. ನಾಗಮಣಿ, ಗೀತಾಂಜಲಿ ಪ್ರಸನ್ನಕುಮಾರ್, ಹಾಲಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.
ಕರ್ನಾಟಕ ಸಂಘಕ್ಕೆ 2023ರಲ್ಲಿ ಕನ್ನಡ ರಾಜ್ಯೋತ್ಸವ ಪುರಸ್ಕಾರ ದೊರೆತ ಸವಿನೆನಪಿಗಾಗಿ 2024ನೇ ಸಾಲಿನಿಂದ ಪ್ರತಿವರ್ಷ ಕರ್ನಾಟಕ ಸಂಘ ನವಿಲುಗರಿ ಹೆಸರಿನಲ್ಲಿ ಸಾಧಕರೊಬ್ಬರಿಗೆ ಪುರಸ್ಕಾರ ನೀಡಲಾಗುತ್ತಿದೆ. ನ.28ರ ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಗಜಾನನ ಶರ್ಮ ಅವರಿಗೆ ಪುರಸ್ಕಾರ ಪ್ರದಾನ ಮಾಡಲಾಗುವುದು. ಪುರಸ್ಕಾರವು 15 ಸಾವಿರ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿರುತ್ತದೆ.