ಶಿವಮೊಗ್ಗದಲ್ಲಿ ಸಚಿವ ಕೃಷ್ಣಬೈರೇಗೌಡ ಗುರುವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
- ದಾಖಲೆ ವಿತರಿಸಲು ಕಾನೂನು ತೊಡಕು
- ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿಕೆ
ಶಿವಮೊಗ್ಗ: ಮಲೆನಾಡಿನ ಕಾನು, ಸೊಪ್ಪಿನ ಬೆಟ್ಟಗಳಲ್ಲಿ ವಾಸಿಸುವವರಿಗೆ ಹಕ್ಕುಪತ್ರ(hkkupatra) ನೀಡಲು ಸುಪ್ರೀಂ ಕೋರ್ಟ್(supreme court) ನಿರ್ದೇಶನದ ಮೇರೆಗೆ ಅರಣ್ಯ(forest) ಇಲಾಖೆ ಅನುಮತಿ ನೀಡುತ್ತಿಲ್ಲ ಎಂದು ಕಂದಾಯ ಸಚಿವ (minster) ಕೃಷ್ಣಬೈರೇಗೌಡ ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಾತ್ಮಕವಾಗಿ ಪರಿಹಾರ ಸಿಕ್ಕರೆ ಮಾತ್ರ ಹಕ್ಕುಪತ್ರ ಕೊಡಲು ಸಾಧ್ಯ. ಅರಣ್ಯ ಇಲಾಖೆ ಹಾಗೂ ಸುಪ್ರೀಂಕೋರ್ಟ್ ಆದೇಶದಿಂದಾಗಿ ಹಕ್ಕುಪತ್ರ ನೀಡಲು ಸಾಧ್ಯವಾಗುತ್ತಿಲ್ಲ ಎಂದರು.
ಮುಂದಿನ ವರ್ಷದಲ್ಲಿ ಸರ್ವೇ ಹಾಗೂ ನೋಂದಣಿ ಕಚೇರಿಗಳಲ್ಲಿ ದಾಖಲೆಗಳ ಸ್ಕಾೃನಿಂಗ್ ಕಾರ್ಯ ಪೂರ್ಣವಾಗಲಿದೆ. ಕಂದಾಯ ಇಲಾಖೆಯಿಂದ ನೀಡಲಾಗುವ ವಂಶವೃಕ್ಷಗಳನ್ನು ನಕಲು ಮಾಡುವ ಪ್ರಶ್ನೆಯೇ ಇಲ್ಲ. ಆನ್‌ಲೈನ್‌ನಲ್ಲಿ ವಂಶವೃಕ್ಷ ದೊರೆಯಲಿದೆ. ಅದನ್ನು ನಕಲು ಮಾಡಲು ಸಾಧ್ಯವಿಲ್ಲ. ಬ್ಯಾಂಕ್ ಹಾಗೂ ಕೋರ್ಟ್‌ಗಳಲ್ಲಿ ವಂಶವೃಕ್ಷನ್ನು ಪರಿಶೀಲಿಸಲು ಅವಕಾಶವಿದೆ ಎಂದು ಹೇಳಿದರು.
ಒಂದು ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡುವ, 6,500 ಗ್ರಾಮಗಳಿಗೆ ಕಂದಾಯ ಗ್ರಾಮದ ಮಾನ್ಯತೆ ಒದಗಿಸುವ ಭೂಗ್ಯಾರಂಟಿ ಸಮರ್ಪಣಾ ಸಮಾವೇಶವನ್ನು ಫೆ.14ರಂದು ಹಾವೇರಿಯಲ್ಲಿ ಆಯೋಜಿಸಲಾಗಿದೆ. ದಾಖಲೆ ರಹಿತ ಗ್ರಾಮಗಳಿಗೆ ಶಾಶ್ವತವಾಗಿ ಕಾನೂನಿನಡಿ ಪರಿಹಾರ ನೀಡಲಾಗುತ್ತಿದೆ. 150 ವರ್ಷಗಳ ಹಿಂದೆ ಕಟ್ಟಿರುವ ಮನೆಗಳಿಗೆ ದಾಖಲೆ ನೀಡುವ ಪ್ರಯತ್ನ ಮುಂದುವರಿದಿದೆ. ಕಂದಾಯ ಗ್ರಾಮ ಯೋಜನೆಯಡಿ 2.20 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುವುದು. ಕಳೆದ ವರ್ಷ ಮೇನಲ್ಲಿ 1.10 ಲಕ್ಷ ಹಕ್ಕುಪತ್ರ ನೀಡಲಾಗಿದೆ. ರಾಜ್ಯ ಸರ್ಕಾರ ಒಂದು ಸಾವಿರ ದಿನಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಹಾವೇರಿಯಲ್ಲಿ ಸಮಾವೇಶ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಬೇರೆಯವರ ಬಗ್ಗೆ ಮಾತಾಡಲ್ಲ
ಶಾಸಕರ ಪ್ರವಾಸದ ಬಗ್ಗೆ ನನಗೆ ತಿಳಿದಿಲ್ಲ. ಯಾರು, ಎಲ್ಲಿಗೆ ಪ್ರವಾಸ ತೆರಳುತ್ತಾರೆ ಎಂಬುದು ಗೊತ್ತಿಲ್ಲ. ನನ್ನ ಇಲಾಖೆ ಕೆಲಸ ಮಾಡಲು ನನಗೆ ಸಮಯ ಸಾಲುತ್ತಿಲ್ಲ. ಹಾಗಾಗಿ ಇನ್ನೊಬ್ಬರ ಕೆಲಸದಲ್ಲಿ ನಾನು ಮೂಗು ತೂರಿಸುವುದಿಲ್ಲ. ಮುಖ್ಯಮಂತ್ರಿಗಳು ನೀಡಿದ ಕೆಲಸವನ್ನು ಮಾಡುತ್ತಿದ್ದೇನೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ದೆಹಲಿ ಪ್ರವಾಸದ ಬಗ್ಗೆ ಮಾತನಾಡುವುದಿಲ್ಲ. ಮುಖ್ಯಮಂತ್ರಿಯಾಗಿ ಹೆಚ್ಚು ಅವಧಿಗೆ ಕೆಲಸ ಮಾಡಿದ ದಾಖಲೆ ಸಿದ್ದರಾಮಯ್ಯ ಅವರದು. ಐದು ವರ್ಷ ಇದೇ ಸ್ಥಾನದಲ್ಲಿ ಇರುತ್ತಾರೆ ಎಂಬ ಬಗ್ಗೆ ಸಾರ್ವಜನಿಕವಾಗಿ ನಾನೇನೂ ಹೇಳುವುದಿಲ್ಲ. ಈ ಚರ್ಚೆಗೆ ಹೊಸ ವ್ಯಾಖ್ಯಾನ ನೀಡಲು ನನ್ನ ಬಳಿ ಏನೂ ಇಲ್ಲ. ಇನ್ನೊಬ್ಬರ ಹೇಳಿಕೆಗೆ ನಾನೇಕೆ ಪ್ರತಿಕ್ರಿಯೆ ನೀಡಬೇಕೆಂದು ಕೃಷ್ಣಬೈರೇಗೌಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.