ಮೆಹಬೂಬ್ ಪಾಷಾ, ಕಂಠೀರವ ಸ್ಟೂಡಿಯೋಸ್ ಅಧ್ಯಕ್ಷ 
ಶಿವಮೊಗ್ಗ

ಶಿವಮೊಗ್ಗದಲ್ಲಿ ಕಂಠೀರವ ಸ್ಟುಡಿಯೋ ಘಟಕ ಸ್ಥಾಪನೆ I kantirava studios

ಪ್ರಮುಖ ಮುಖ್ಯಾಂಶಗಳು

  • 25 ಎಕರೆ ಭೂಮಿ ಮಂಜೂರು ಮಾಡಲು ಪ್ರಸ್ತಾವನೆ
  • ಅಧ್ಯಕ್ಷ ಮೆಹಬೂಬ್ ಪಾಷಾ ಮಾಹಿತಿ
  • ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸುವ ಉದ್ದೇಶ
ಶಿವಮೊಗ್ಗ: ಚಿತ್ರೀಕರಣದ ಚಟುವಟಿಕೆಗಳನ್ನು ವಿಕೇಂದ್ರೀಕರಿಸುವ ಮತ್ತು ಸ್ಥಳೀಯ ಕಲಾವಿದರಿಗೆ (artist) ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕಂಠೀರವ ಸ್ಟುಡಿಯೋದ ನೂತನ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಕಂಠೀರವ (kantirava) ಸ್ಟುಡಿಯೋಸ್ (studios) ಅಧ್ಯಕ್ಷ ಮೆಹಬೂಬ್ ಪಾಷಾ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಕಂಠೀರವ ಸ್ಟುಡಿಯೋಸ್ ಘಟಕ ಸ್ಥಾಪನೆಗೆ ಜಮೀನು ಗುರುತಿಸುವ ಸಂಬಂಧ ಪ್ರಭಾರ ಜಿಲ್ಲಾಧಿಕಾರಿ ಎನ್.ಹೇಮಂತ್ ಅವರೊಂದಿಗೆ ಶುಕ್ರವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಮೊಗ್ಗದಲ್ಲಿ ಕಂಠೀರವ ಸ್ಟುಡಿಯೋ ನಿರ್ಮಾಣಕ್ಕಾಗಿ 25 ಎಕರೆ ಜಮೀನು ಮಂಜೂರು ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ಜಮೀನು ಮಂಜೂರು ಸಂಬಂಧ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಈಗಾಗಲೇ ಪತ್ರ ಬರೆದಿದ್ದು, ಪ್ರಕ್ರಿಯೆ ನಡೆಯುತ್ತಿದೆ. ಪ್ರಸ್ತುತ ಚಿತ್ರೀಕರಣದ ಚಟುವಟಿಕೆಗಳು ಬೆಂಗಳೂರಿಗೆ ಸೀಮಿತವಾಗಿವೆ. ಇದರಿಂದ ಅಲ್ಲಿ ಜಾಗದ ಕೊರತೆ ಎದುರಾಗುತ್ತಿದೆ. ಬೇರೆ ಜಿಲ್ಲೆಗಳಿಗೂ ಸೌಲಭ್ಯ ವಿಸ್ತರಿಸುವುದರಿಂದ ಆ ಭಾಗದ ಕಲೆ, ಸಂಸ್ಕೃತಿ, ಕಲಾವಿದರಿಗೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂದು ತಿಳಿಸಿದರು.

ಹಾರನಹಳ್ಳಿಯಲ್ಲಿ ಘಟಕ

ಶಿವಮೊಗ್ಗ ಜಿಲ್ಲೆ ನೈಸರ್ಗಿಕ ಸೌಂದರ್ಯದಿಂದ ಕೂಡಿದೆ. ಹೊರಾಂಗಣ ಚಿತ್ರೀಕರಣಕ್ಕೆ ಸೂಕ್ತವಾಗಿದೆ. ಇಲ್ಲಿ ಚಿತ್ರೀಕರಣ ಘಟಕ ಆರಂಭವಾದರೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗೂ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಹೋಬಳಿಯ ಜಾಜುಹಳ್ಳಿಯಲ್ಲಿ 25 ಎಕರೆ ಜಮೀನು ಮಂಜೂರು ಮಾಡುವಂತೆ ಕೋರಲಾಗಿದೆ ಎಂದು ಮೆಹಬೂಬ್ ಪಾಷಾ ಹೇಳಿದರು. ಹೊಸದಾಗಿ ಸ್ಥಾಪನೆಯಾಗುವ ಸ್ಟುಡಿಯೋದಲ್ಲಿ ಚಿತ್ರೀಕರಣ, ರೆಕಾರ್ಡಿಂಗ್ ಮತ್ತು ಲ್ಯಾಬ್ ಡೆವಲಪ್‌ಮೆಂಟ್‌ನಂತಹ ಆಧುನಿಕ ತಂತ್ರಜ್ಞಾನದ ಸೌಲಭ್ಯ ಕಲ್ಪಿಸಲಾಗುವುದು. ಇದರಿಂದ ಚಿತ್ರದ ಸಂಪೂರ್ಣ ಕೆಲಸಗಳು ಒಂದೇ ಸೂರಿನಡಿ ನಡೆಯಲು ಸಾಧ್ಯವಾಗುತ್ತದೆ ಎಂದರು.
"

ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ 60 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ, ವಜ್ರಮಹೋತ್ಸವದ ನೆನಪಿಗಾಗಿ ಈ ವಿಸ್ತರಣಾ ಯೋಜನೆ ಹಮ್ಮಿಕೊಳ್ಳಲಾಗಿದೆ. ಯೋಜನೆಗೆ ಸಹಕರಿಸುವಂತೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಮನವಿ ಸಲ್ಲಿಸಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

— ಮೆಹಬೂಬ್ ಪಾಷಾ ಕಂಠೀರವ ಸ್ಟುಡಿಯೋಸ್ ಅಧ್ಯಕ್ಷ