ಸಾಗರ ನಗರಸಭೆ ರಂಗಮಂದಿರದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಾಂಸ್ಕೃತಿಕ ವೈಭವ ಸಂಜೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು. ಗೋಪಾಲಕೃಷ್ಣ ಬೇಳೂರು, ಮೈತ್ರಿ ಪಾಟೀಲ್, ಸವಿತಾ ವಾಸು, ವೀರೇಶ್‌ಕುಮಾರ್ ಇತರರಿದ್ದರು. 
ಶಿವಮೊಗ್ಗ

ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಸಿಗಲಿ ಅವಕಾಶ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿಕೆ
  • ಸಾಗರ ನಗರಸಭೆಯಿಂದ ಸಾಂಸ್ಕೃತಿಕ ವೈಭವ ಸಂಜೆ
  • ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ
ಸಾಗರ: ಕನ್ನಡಿಗರಿಗೆ ಐಟಿ ಬಿಟಿ ಕಂಪನಿಗಳಲ್ಲಿ ಶೇ. 90ರಷ್ಟು ಉದ್ಯೋಗ ಮೀಸಲಿಡಲು ಕಡ್ಡಾಯಗೊಳಿಸಬೇಕು. ಕನ್ನಡಿಗರಿಗೆ ಉದ್ಯೋಗ ಕಲ್ಪಿಸದ ಐಟಿಬಿಟಿ ಕಂಪನಿಗಳಿಗೆ ರಾಜ್ಯದಲ್ಲಿ ಅವಕಾಶ ನೀಡಬಾರದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆಗ್ರಹಿಸಿದರು.
ಸಾಗರ ನಗರಸಭೆ ರಂಗಮಂದಿರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ನಗರಸಭೆಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಾಂಸ್ಕೃತಿಕ ವೈಭವವನ್ನು ಸಂಜೆ ಉದ್ಘಾಟಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಮಾತನಾಡಿ, ಕನ್ನಡ ನೆಲದಲ್ಲಿರುವ ಕಂಪನಿಗಳಲ್ಲಿ ಕನ್ನಡಿಗರು ಪರಕೀಯರಾಗಿ ಕಳೆದು ಹೋಗಬಾರದು. ಅಧಿವೇಶನದಲ್ಲಿ ಈ ಕುರಿತು ಚರ್ಚೆ ನಡೆಸಿ ಸರ್ಕಾರದ ಮೇಲೆ ಒತ್ತಡ ತರುತ್ತೇನೆ ಎಂದು ತಿಳಿಸಿದರು.
"

ಕರ್ನಾಟಕದ ನೆಲ, ಜಲ, ಸಂಪನ್ಮೂಲ ಬಳಸಿಕೊಂಡು ಆದಾಯ ಗಳಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಡ್ಡಾಯವಾಗಿದೆ. ಶೇ. 90ರಷ್ಟು ಉದ್ಯೋಗವನ್ನು ಕನ್ನಡಿಗರಿಗೆ ಮೀಸಲಿಡುವ ಕಡ್ಡಾಯ ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು. 

 ಗೋಪಾಲಕೃಷ್ಣ ಬೇಳೂರುಶಾಸಕ

ಸಾಂಸ್ಕೃತಿಕವಾಗಿ ಮೈಸೂರಿನ ನಂತರ ಸಾಗರ ಅತ್ಯಂತ ಶ್ರೀಮಂತ ಊರಾಗಿದೆ. ಕಲೆ, ಸಾಹಿತ್ಯ, ಸಾಂಸ್ಕೃತಿಕ, ರಂಗಭೂಮಿ ಸೇರಿದಂತೆ ವೈವಿಧ್ಯತೆ ನಮ್ಮೂರಿನಲ್ಲಿದೆ ಎನ್ನುವುದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಸಾಗರವನ್ನು ಅಭಿವೃದ್ಧಿ ಜತೆ ಸಾಂಸ್ಕೃತಿಕವಾಗಿ ಸಹ ಕಟ್ಟುವ ಉದ್ದೇಶ ಹೊಂದಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸುವುದು ಮಾದರಿಯಾಗಿದೆ ಎಂದರು.
ಶಿಕ್ಷಣ ಕ್ಷೇತ್ರದಿಂದ ಸತ್ಯನಾರಾಯಣ, ಸಾಹಿತ್ಯ ಕ್ಷೇತ್ರದಿಂದ ಮೋಹನ್‌ಮೂರ್ತಿ, ಪ.ಬಂಗಾರಿಭಟ್, ಸಾಮಾಜಿಕ ಕ್ಷೇತ್ರದಿಂದ ಸರಸ್ವತಿ ನಾಗರಾಜ್, ಸಾಂಸ್ಕೃತಿಕ ಕ್ಷೇತ್ರದಿಂದ ಶಿವಮೂರ್ತಿ, ಕ್ರೀಡಾ ಕ್ಷೇತ್ರದಿಂದ ಕೆ.ಆರ್.ವಿಭವಾ, ಎಸ್.ಡಿ.ಕೌಶಿಕ್ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಉಪವಿಭಾಗಾಧಿಕಾರಿ ವೀರೇಶಕುಮಾರ್, ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಪೌರಾಯುಕ್ತ ಎಚ್.ಕೆ.ನಾಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಇ.ಪರಶುರಾಮಪ್ಪ, ಕಾರ್ಯನಿರ್ವಾಹಣಾಧಿಕಾರಿ ಶಿವಪ್ರಕಾಶ್ ಶೈಲೇಶ್, ವಿ.ಟಿ.ಸ್ವಾಮಿ, ಮದನ, ಎಚ್.ಜಿ.ಸುಬ್ರಹ್ಮಣ್ಯ ಭಟ್, ಸಾಗರ ನಗರ ಸಭೆ ಸದಸ್ಯರು ಹಾಜರಿದ್ದರು.