ರಿಪ್ಪನ್‌ಪೇಟೆ ಸಮೀಪದ ಅಮೃತ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ್ದ ದತ್ತಿನಿಧಿ ಕಾರ್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಉದ್ಘಾಟಿಸಿದರು. ಹಾಲಪ್ಪ ಸುಂಕುರ್, ಡಿ.ಎಸ್.ನಾಗರಾಜ್, ಗಣೇಶ ಮೂರ್ತಿ ಇತರರಿದ್ದರು. 
ಶಿವಮೊಗ್ಗ

ಆಡಳಿತದಲ್ಲಿ ಕನ್ನಡ ಭಾಷೆ ಬಳಕೆಯಾಗಲಿ

ರಿಪ್ಪನ್‌ಪೇಟೆ: ಕನ್ನಡ ಭಾಷೆಗೆ ಜಗತ್ತಿನಲ್ಲಿ ಅತ್ಯಂತ ಗೌರವಯುತ ಸ್ಥಾನವಿದೆ. ಆದರೆ ಅನ್ಯಭಾಷೆ ಆಕರ್ಷಣೆ ಹಾಗೂ ಮಾತೃಭಾಷೆ ಬಗ್ಗೆ ಕೀಳರಿಮೆ ಇರುವುದರಿಂದ ಕನ್ನಡ ಭಾಷೆ ಬಳಕೆ ಕಡಿಮೆಯಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.
ಅಮೃತ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹೊಸನಗರ ತಾಲೂಕು ಕಸಾಪದಿಂದ ಆಯೋಜಿಸಿದ್ದ ದತ್ತಿನಿಧಿ ಕಾರ್ಯಕ್ರಮದಲ್ಲಿ ಮಾತನಾಡಿ, ಜಗತ್ತಿನ ಎಲ್ಲೆಡೆ ಆಯಾ ಪ್ರಾಂತದ ಭಾಷೆ ಅಧಿಕೃತ. ಆಡಳಿತ ಹಾಗೂ ಶೈಕ್ಷಣಿಕ ಭಾಷೆ ಆಗಿದೆ. ಆದರೆ ರಾಜ್ಯದಲ್ಲಿ ವ್ಯಾವಹಾರಿಕ ಭಾಷೆ ಇಂಗ್ಲಿಷ್ ಆಗಿರುವುದು ದುರದೃಷ್ಟಕರ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ನಾಡಿನಲ್ಲಿ ಕನ್ನಡ ಕಟ್ಟುವ ಕೆಲಸ ಮಾಡುತ್ತಿದೆ. ಪರಿಷತ್‌ಗೆ ಬೆನ್ನೆಲುಬಾಗಿ ನಿಂತಿರುವುದು ದಾನಿಗಳು. ದತ್ತಿನಿಧಿ ನೀಡುವ ಮೂಲಕ ಕನ್ನಡದ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ವರ್ಷದಲ್ಲಿ ಪದವಿಪೂರ್ವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಕನ್ನಡದ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ ಆರಂಭಿಸಿದ್ದೇವೆ. ಆ ಮೂಲಕ ಕನ್ನಡ ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತೇವೆ ಎಂದರು.
ಕನಕಪುರದ ನಿವೃತ್ತ ಉಪನ್ಯಾಸಕ ಡಿ.ಎಸ್.ನಾಗರಾಜ್, ಕಸಾಪ ತಾಲೂಕು ಅಧ್ಯಕ್ಷ ಗಣೇಶಮೂರ್ತಿ, ಪ್ರಾಚಾರ್ಯ ಹಾಲಪ್ಪ ಸಂಕುರ್, ಸಿಡಿಸಿ ಕಾರ್ಯಾಧ್ಯಕ್ಷ ಟಿ.ಡಿ.ಸೋಮಶೇಖರ, ಮಂಜುನಾಥ್ ಕಾಮತ್, ತ.ಮ.ನರಸಿಂಹ, ಅಶ್ವಿನಿ ಪಂಡಿತ್, ಕೆ.ಜಿ.ನಾಗೇಶ್, ಬಶೀರ್ ಅಹಮ್ಮದ್, ದತ್ತಿನಿಧಿ ಪ್ರಾಯೋಜಕ ವಸಂತ ಕುನ್ನೂರು ಇತರರಿದ್ದರು.